ನವದೆಹಲಿ, ಜ.30 : ಕಾಮಪಿಪಾಶು ಒಬ್ಬ 8 ತಿಂಗಳ ಮಗುವಿನ ಮೇಲೆ ಕ್ರೌರ್ಯ ಮೆರೆದ ಭೀಭತ್ಸ ಕೃತ್ಯ ದೇಶದ ರಾಜಧಾನಿ ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ. ಮಗುವಿನ ಸಂಬಂಧಿಯೇ ಆಗಿರುವ 28 ವರ್ಷದ ಯುವಕ ಎಳೆ ಕಂದಮ್ಮನ ಮೇಲೆ ಅತ್ಯಾಚಾರ ನಡೆಸಿದ್ದು, ಘಟನೆ ಬೆಳಕಿಗೆ ಬಂದ ತಕ್ಷಣ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾಧ್ಯಮ ಮೂಲಗಳ ಮಾಹಿತಿ ಪ್ರಕಾರ ವಾಯುವ್ಯ ದೆಹಲಿಯ ನೇತಾಜಿ ಸುಭಾಷ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಗುವಿನ ಪೋಷಕರು, ದಿನಗೂಲಿ ನೌಕರರಾಗಿದ್ದು, ಕೆಲಸ ನಿಮಿತ್ತ ಮಗುವನ್ನು ನೋಡಿಕೊಳ್ಳುವಂತೆ ತಮ್ಮ ಅತ್ತಿಗೆಯ ಬಳಿ ಬಿಟ್ಟು ತೆರಳಿದ್ದಾರೆ. ಆದರೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಬಳಸಿಕೊಂಡ ಆಕೆಯ 28 ವರ್ಷದ ಪುತ್ರ ಈ ಹೇಯ ಕೃತ್ಯವೆಸಗಿದ್ದಾನೆ. ಕೆಲಸ ಮುಗಿಸಿ ರಾತ್ರಿ ಸುಮಾರು 12.30ರ ಸಮಯಕ್ಕೆ ಹೆತ್ತವರು ಮನೆ ಬಳಿ ಬಂದು ನೋಡಿದಾಗ ಮಗು ರಕ್ತದ ಮಡುವಿನಲ್ಲಿ ನರಳಾಡುತ್ತಿತ್ತು. ಗಾಬರಿಗೊಂಡ ಪೋಷಕರು ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಈ ವೇಳೆ ಅತ್ಯಾಚಾರದ ಕೃತ್ಯ ಬೆಳಕಿಗೆ ಬಂದಿದೆ. ಇದೇ ವೇಳೆ ಪೊಲೀಸ್ ವಿಚಾರಣೆ ವೇಳೆ ಆರೋಪಿ ಕುಡಿದ ಮತ್ತಿನಲ್ಲಿ ಕೃತ್ಯವೆಸಗಿರುವ ಕುರಿತು ಬಾಯಿ ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಮಗುವಿನ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.