ಮಂಗಳೂರು ಜ 30 : ಕೋಮಗಲಭೆಯಂತಹ ಸಾಮಾಜಿಕ ಸೂಕ್ಷ್ಮ ಘಟನೆಗಳ ಸಂದರ್ಭದಲ್ಲಿಯೂ ಮಾನವೀಯತೆ ಮೆರೆದ ಇಬ್ಬರನ್ನು ವ್ಯಕ್ತಿಗಳನ್ನು ಜ 30 ರ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಭಿನಂದಿಸಿಲಾಯಿತು. ಜ 3 ರಂದು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕಾಟಿಪಳ್ಳದ ದೀಪಕ್ ರಾವ್ ಹಾಗೂ ಕೊಟ್ಟಾರ ಚೌಕಿ ಬಳಿ ಹತ್ಯೆಗೀಡಾದ ಬಶೀರ್ ಅವರ ಪ್ರಾಣ ರಕ್ಷಿಸಲು ಹಾಗೂ ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲು ನೆರವಾದ ವ್ಯಾಪಾರಿ ಅಬ್ದುಲ್ ಮಜೀದ್ ಹಾಗೂ ಚಾಲಕ ಶೇಖರ್ ಕುಲಾಲ್ ಅವರು ಸಮಾಜ ಗೌರವಿಸಬೇಕಾದ ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನು ಪ್ರಶಂಸಿಸುವಂತೆ ಗುಲ್ಬರ್ಗಾದ ವಕೀಲ ಪಿ. ವಿಲಾಸ್ ಕುಮಾರ್ , ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರು. ದೂರದಿಂದ ಬಂದು ಅವರಿಗೆ ಇಲ್ಲಿ ಗೌರವ ಸಲ್ಲಿಸಲು ಅಸಾಧ್ಯವಾದ ಕಾರಣ ಜಿಲ್ಲಾಧಿಕಾರಿಗಳ ಮೂಲಕ ಈ ಕೆಲಸವನ್ನು ನೆರವೇರಿಸುವಂತೆ 50,000 ಸಾವಿರ ಮೌಲ್ಯದ ಎರಡು ಚೆಕ್ ಗಳನ್ನು ಪತ್ರದೊಂದಿಗೆ ರವಾನಿಸಿದ್ದರು. ಅವರ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ, ಅಪರ ಜಿಲ್ಲಾಧಿಕಾರಿ ಕುಮಾರ್ ಅಬ್ದುಲ್ ಮಜೀದ್ ಹಾಗೂ ಶೇಖರ್ ಕುಲಾಲ್ ಗೆ ಡಿಸಿಪಿ ಹನುಮಂತರಾಯ ಹಾಗೂ ಪತ್ರಕರ್ತರ ಸಮ್ಮಖದಲ್ಲಿ 50,000 ಸಾವಿರ ಚೆಕ್ ನ್ನು ಹಸ್ತಾಂತರಿಸಿದರು. ಆ ಬಳಿಕ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕುಮಾರ್ ಗುಲ್ಬರ್ಗಾದ ವಕೀಲ ಪಿ. ವಿಲಾಸ್ ಕುಮಾರ್ ಅವರು ಪ್ರಚಾರ ಬಯಸದೆ ಈ ಕಾರ್ಯಕ್ಕೆ ಮುಂದಾಗಿರುವದು ಶ್ಲಾಘನೀಯ ಎಂದರು. ಜಾತಿ ಧರ್ಮಕ್ಕೂ ಮಿಗಿಲು ಮಾನವಿಯತೆಯ ಧರ್ಮ ಎನ್ನುವುದನ್ನು ಸಮಾಜಕ್ಕೆ ಮಜೀದ್ ಮತ್ತು ಶೇಖರ್ ತೋರಿಸಿಕೊಟ್ಟಿದ್ದಾರೆ. ಹಾಗಾಗಿ ಇಂತಹ ಉತ್ತಮ ಕೆಲಸ ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಪತ್ರಕರ್ತರ ಸಮ್ಮುಖದಲ್ಲಿ ಈ ಕಾರ್ಯವನ್ನು ನೆರವೇರಿಸುತ್ತಿರುವುದಾಗಿ ಹೇಳಿದರು.
ಇದೇ ವೇಳೆ ಚೆಕ್ ಸ್ವೀಕರಿಸಿ ಮಾತನಾಡಿದ ಅಬ್ದುಲ್ ಮಜೀದ್, ದೀಪಕ್ ಪ್ರಾಣ ಉಳಿಸಲಾಗಲಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ. ಹೀಗಾಗಿ ಚೆಕ್ ಬೇಕಾಗಿರಲಿಲ್ಲ ಎಂದು ನೋವಿನಿಂದಲೇ ನುಡಿದರು. ಬಳಿಕ ಮಾತನಾಡಿದ ಚಾಲಕ ಶೇಖರ್, ಬಶೀರ್ ಅವರ ಮುಖ ಪರಿಚಯವಿತ್ತು ವಿನಹ ಪರಿಚಯಸ್ಥರಾಗಿರಲಿಲ್ಲ. ನಾನು ಖಾಸಗಿ ಅಂಬ್ಯುಲೆನ್ಸ್ ಚಾಲಕ ಯಾವುದೋ ದಾರಿಯಲ್ಲಿ ಹೋಗಬೇಕಾಗಿದ್ದ ನಾನು ಅಂದು ಆ ದಾರಿಯಲ್ಲಿ ಬಂದಿದ್ದೆ. ಆಗ ಯುವಕನೊಬ್ಬ ಆತಂಕದಲ್ಲಿ ಕರೆ ಮಾಡುವುತ್ತ ಆತ್ತ ಇತ್ತ ಓಡಾಡುತ್ತಿರುವುದನ್ನು ಕಂಡು ವಿಚಾರಿಸಿ, ಬಳಿಕ ರಕ್ತದ ಮಡುವಿನಲ್ಲಿ ಗಂಭೀರ ಸ್ಥಿತಿಯಲ್ಲಿ ಬಿದ್ದಿದ ಬಶೀರ್ ಅವರನ್ನು ಕಂಡು ಅಂಬ್ಯುಲೆನ್ಸ್ ನಲ್ಲಿ ಸಾಗಿಸಿ ಆಸ್ಪತ್ರೆಗೆ ದಾಖಲಿಸಿದೆ ಎಂದರು.