ಮಂಜೇಶ್ವರ, ಜ 19(DaijiworldNews/SM): ಮಿಯಪದವಿನಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಶಾಲಾ ಶಿಕ್ಷಕಿಯ ಮೃತದೇಹ ಶನಿವಾರ ಬೆಳಗ್ಗೆ ಪೆರುವಾಡ್ ಸಮುದ್ರ ತೀರದಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತವೇ ಬೆಳೆದುಕೊಂಡಿದೆ.
ಚಿಗುರುಪಾದೆ ನಿವಾಸಿಯಾಗಿರುವ ರೂಪ ಶ್ರೀ ಬಿ.ಕೆ (40) ಮೀಯಪದವು ವಿದ್ಯಾವರ್ಧಕ ಹೈಸ್ಕೂಲಿನ ಶಿಕ್ಷಿಕಿಯಾಗಿ ಸೇವೆಯಲ್ಲಿದ್ದರು. ಗುರುವಾರ ಶಾಲೆಗೆ ತೆರಳಿದ್ದು ಶಾಲೆಯಿಂದ ಅಪರಾಹ್ನ ರಜೆ ಹಾಕಿ ಪುತ್ರಿ ವ್ಯಾಸಂಗ ಮಾಡುವ ಮಂಜೇಶ್ವರದ ಶಾಲೆಯಲ್ಲಿ ಶಾಲಾ ಶುಲ್ಕ ಪಾವತಿ ಮಾಡಿ ವಾಪಾಸಗಿದ್ದರು. ಆದರೆ ಆ ಬಳಿಕ ನಾಪತ್ತೆಯಾಗಿದ್ದು ಅವರ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಸಮುದ್ರ ತೀರದಲ್ಲಿ ಶನಿವಾರದಂದು ಕಂಡುಬಂದಿದೆ.
ಒಂದು ಮೂಲದ ಪ್ರಕಾರ ಶಿಕ್ಷಕಿ ರೂಪಾ ಅವರನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪ ವ್ಯಕ್ತವಾಗಿದೆ. ಇನ್ನು ಅವರ ಬಳಿಯಲ್ಲಿದ್ದ ಎರಡು ಮೊಬೈಲ್ ಗಳ ಪೈಕಿ ಒಂದು ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮತ್ತೊಂದು ಮೊಬೈಲ್ 1 ದಿನ ರಿಂಗ್ ಆಗುತ್ತಿತ್ತು ಎನ್ನಲಾಗಿದೆ. ಅವರ ಮೃತದೇಹ ಪತ್ತೆಯಾಗಿರುವ ಸಮುದ್ರ ಕಿನಾರೆಯಿಂದ ನೂರಾರು ಕಿಲೋಮೀಟರ್ ದೂರದಲ್ಲಿ ಮೊಬೈಲ್ ಲೊಕೇಶನ್ ತೋರಿಸಿತ್ತಾದರೂ, ಇದುವರೆಗೂ ಪತ್ತೆಯಾಗಿಲ್ಲ.
ಇನ್ನು ಶಿಕ್ಷಕಿಯ ಮುಖ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. ಇನ್ನೊಂದೆಡೆ ತಲೆ ಕೂದಲು ಸಂಪೂರ್ಣ ಕಿತ್ತುಹೋಗಿದೆ ಎಂಬುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಅವರ ಸ್ಕೂಟರ್ ಕೂಡ ಹೊಸಂಗಡಿಯಲ್ಲಿ ಪತ್ತೆಯಾಗಿರುವುದರಿಂದ ಕೆಲವೊಂದು ಸಂಶಯಗಳಿಗೆ ಕಾರಣವಾಗಿದೆ. ಆದರೆ, ಇದುವರೆಗೂ ಇದಕ್ಕೆ ಸಂಬಂಧಿಸಿ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಈ ನಡುವೆ ಅದೇ ಶಾಲೆಯ ಶಿಕ್ಷಕನೋರ್ವನ ಮೇಲೆ ಬಲವಾದ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದು, ಈ ಸಾವಿನಲ್ಲಿ ಅವರ ಕೈವಾಡವಿರುವ ಬಗ್ಗೆ ಆರೋಪಿಸಲಾಗಿದೆ. ಈಗಾಗಲೇ ಆ ಶಿಕ್ಷಕನನ್ನು ಪೊಲೀಸರು ಬಂಧಿಸಿ ಯಾವುದೇ ಸಾಕ್ಷ್ಯಗಳು ಸಿಗದ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಿದ್ದಾರೆ. ಆದರೆ ಪ್ರಕರಣ ಮಾತ್ರ ತೀವ್ರ ನಿಗೂಢತೆಯನ್ನು ಪಡೆದುಕೊಂಡಿದೆ.