ವಿಟ್ಲ, ಜ.20 (Daijiworld News/PY) : ಅಡಿಕೆ ಕಳ್ಳತನ ಪ್ರಕರಣಗಳ ವಿಚಾರವಾಗಿ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 1 ವರ್ಷದಿಂದ ತಲೆಮರೆಸಿಕೊಂಡಿದ್ದ ಕಡಂಬು ನಿವಾಸಿ ಅಶ್ರಫ್(21) ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅಶ್ರಫ್ ಎಂಬಾತ ವಿಟ್ಲಪಡ್ನೂರು, ಎರ್ಮೆನಿಲೆ, ಕೊಳ್ನಾಡು, ಮಂಕುಡೆ, ಸುರಿಬೈಲು ಹಾಗೂ ಕಂಬಳಬೆಟ್ಟು ಭಾಗದಲ್ಲಿ ಅಡಿಕೆ ಕಳ್ಳತನ ಮಾಡಿದ್ದ. ಅಲ್ಲದೇ ಅಡಿಕೆ ಕಳ್ಳತನ ಮಾಡುವ ವೇಳೆ ನಾಯಿಗೆ ವಿಷ ಉಣಿಸಿದ ಘಟನೆಯಲ್ಲೂ ಭಾಗಿಯಾಗಿದ್ದ ಈತನ ವಿರುದ್ದ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.
ಅಶ್ರಫ್ನ ವಿಚಾರವಾಗಿ ಖಚಿತವಾದ ಮಾಹಿತಿ ಪಡೆದ ವಿಟ್ಲ ಪೊಲೀಸರಾದ ಶ್ರೀಧರ.ಕೆ ಮಂಜುನಾಥ ಅವರು ಪೊಲೀಸ್ ವರಿಷ್ಠಾಧಿಕಾರಿ ಡಾ.ಲಕ್ಷ್ಮೀ ಪ್ರಸಾದ್ ಡಿವೈಎಸ್ಪಿ ವೆಲೆಂಟಿನ್ ಡಿ’ಸೋಜಾ ಅವರ ಮಾರ್ಗದರ್ಶನದಲ್ಲಿ ಸಿಐ ಟಿ.ಡಿ.ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲದ ಪ್ರೊಬೆಷನರಿ ಠಾಣಾಧಿಕಾರಿ ವಿನೋದ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.