ಮಂಗಳೂರು, ಜ 20 (Daijiworld News/MSP): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ನಡೆದಿದ್ದ ಗಲಭೆ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಸಿ ಕ್ಯಾಮೆರಾ ವಿಡಿಯೋಚಿತ್ರೀಕರಣ, ಮೊಬೈಲ್ ಲೊಕೇಶನ್, ಮತ್ತು ಎಲ್ಲಾ ಸಾಕ್ಷಾಧಾರಗಳನ್ನು ಆಧರಿಸಿ ಗಲಭೆಕೋರರನ್ನು ಗುರುತಿಸಲಾಗಿದ್ದು ನೂರಕ್ಕೂ ಅಧಿಕ ಮಂದಿಗೆ ಜನವರಿ 20ರಂದು ತನಿಖೆಗೆ ಹಾಜರಾಗುವಂತೆ ತನಿಖಾಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ.
ಈ ನೋಟಿಸ್ ನಲ್ಲಿ ಕೊಲೆಯತ್ನ ಅಕ್ರಮ ಕೂಟ ಗಲಭೆಗೆ ಪ್ರಚೋದನೆ ಮುಂತಾದ ಗಂಭೀರ ಶಿಕ್ಷಣಗಳನ್ನು ನಮೂದಿಸಲಾಗಿದೆ. ಬಂದರು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯಲಿದ್ದು ತನಿಖೆಗೆ ಹಾಜರಾಗದಿದ್ದರೆ ಅಥವಾ ಸಮರ್ಪಕ ಉತ್ತರ ನೀಡದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಗಲಭೆ ಘಟನೆಯಲ್ಲಿ ಕೇರಳದವರು ಭಾಗವಹಿಸಿದ್ದರು ಎಂಬ ಆರೋಪ ಕೇಳಿಬಂದಿದ್ದು ನೋಟಿಸ್ ಪಡೆದವರಲ್ಲಿ ಕರ್ನಾಟಕ-ಕೇರಳ ಗಡಿಭಾಗದಲ್ಲಿ ಸೇರಿದ್ದಾರೆ.
ಅದೇ ದಿನ ಮಂಜೇಶ್ವರ, ಕುಂಜತ್ತೂರು, ಉಪ್ಪಳ, ಹೊಸಂಗಡಿ, ಕಾಸರಗೋಡು ಮೂಲದಿಂದ ಮಂಗಳೂರಿಗೆ ಬಂದಂತಹ ಕೆಲವು ಅಮಾಯಕರಿಗೆ ನೋಟಿಸ್ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸ್ ಇಲಾಖೆ ಬೇರೆ ಬೇರೆ ಉದ್ದೇಶಕ್ಕಾಗಿ ಬಂದ ಅನೇಕರು ಅಮಾಯಕರು ಇರಬಹುದು ಆದರೆ ತನಿಖೆಯ ಉದ್ದೇಶದಿಂದ ವಿಚಾರಣೆ ನಡೆಸುವುದು ಅನಿವಾರ್ಯ ಅಮಾಯಕರಿಗೆ ಇಲಾಖೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಭಯಪಡುವ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.