ಬಂಟ್ವಾಳ, ಜ 20 (Daijiworld News/MB): ಪೊಲೀಸರೆಂದು ಹೇಳಿಕೊಂಡು ಹಿರಿಯ ವ್ಯಕ್ತಿಯೊಬ್ಬರಲ್ಲಿದ್ದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೂಚಿದ ಘಟನೆ ಬಿ.ಸಿ. ರೋಡ್ ಸಮೀಪದ ಕೈಕಂಬದಲ್ಲಿ ಶನಿವಾರ ನಡೆದಿದೆ.
ಪರ್ಲಿಯಾ ಮಿತ್ತಬೈಲು ಕೊಡಂಗೆ ನಿವಾಸಿ ಶಿವಪ್ರಸಾದ್ ಶರ್ಮ ಅವರು ಮಧ್ಯಾಹ್ನ ಸುಮಾರು 12 ಗಂಟೆಗೆ ಕೂದಲು ಕತ್ತರಿಸುವ ಸಲುವಾಗಿ ಸೆಲೂನ್ಗೆ ಹೊರಟಿದ್ದು ಆ ಸಂದರ್ಭದಲ್ಲಿ ಬೈಕ್ನಲ್ಲಿ ಇಬ್ಬರು ಬಂದಿದ್ದಾರೆ. ಆ ಇಬ್ಬರ ಪೈಕಿ ಓರ್ವ ತಾನು ಕ್ರೈಂ ಬ್ರಾಂಚಿನ ಪೊಲೀಸ್ ಅಶೋಕ್ ಎಂದು ಪರಿಚಯಿಸಿಕೊಂಡು ಶಿವರಾಮರಲ್ಲಿ, "ಈ ರೀತಿ ಚಿನ್ನಾಭರಣ ಹಾಕಿಕೊಂಡು ತಿರುಗಾಡುವುದು ಸರಿಯಲ್ಲ, ಕಳ್ಳರಿದ್ದಾರೆ ಎಂದು ಹೇಳಿದ್ದಾನೆ.
ಆ ಸಂದರ್ಭದಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬ ಗುರುತಿನ ಚೀಟಿ ಕೇಳಿದಾಗ ಅದನ್ನು ತೋರಿಸಿದ್ದು ಬಳಿಕ ಶಿವಪ್ರಸಾದ್ ಅವರ ಮೊಬೈಲ್ ಹಾಗೂ ಚಿನ್ನಾಭರಣವನ್ನು ಟವೆಲ್ ಒಂದರಲ್ಲಿ ಕಟ್ಟಿ ಚೀಲದಲ್ಲಿ ಹಾಕಿ ಅವರಿಬ್ಬರು ಬೈಕ್ನಲ್ಲಿ ತೆರಳಿದ್ದಾರೆ.
ಶಿವಪ್ರಸಾದ್ ಅವರು ಕೂದಲು ಕತ್ತರಿಸಿ ಮನೆಗೆ ಬಂದು ಸ್ನಾನ ಮಾಡಿ ಚೀಲದಲ್ಲಿದ್ದ ಟವೆಲ್ ತೆಗೆದು ನೋಡಿದಾಗ ಅದರಲ್ಲಿ ಮೊಬೈಲ್ ಮಾತ್ರವಿದ್ದು ಚಿನ್ನಾಭರಣ ಇರಲಿಲ್ಲ.ಕೂಡಲೇ ಅವರು ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸ್ಥಳಕ್ಕೆ ಬಂಟ್ವಾಳ ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ, ಸಿಐ ಟಿ.ಡಿ.ನಾಗರಾಜ್, ಎಸ್ಐ ಅವಿನಾಶ್, ಎಎಸ್ಐ ಸಂಜೀವ, ಎಚ್ಸಿ ಸುರೇಶ್ ಅವರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತ್ತಿದ್ದಾರೆ.