ಕಾಸರಗೋಡು, ಜ 30 : ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಂಡೋಸಲ್ಫಾನ್ ಸಂತ್ರಸ್ಥರು ಜ 30 ರಂದು ಬೆಳಗ್ಗಿನಿಂದ ತಿರುವನಂತಪುರದ ಸೆಕ್ರಟರಿಯಟ್ ಮುಂಭಾಗದಲ್ಲಿ ಧರಣಿ ಆರಂಭಿಸಿದ್ದಾರೆ. ಕಾಸರಗೋಡಿನಿಂದ ತೆರಳಿದ 250 ಮಂದಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ತಿರುವನಂತಪುರದಲ್ಲಿ ನಡೆದ ಪ್ರತಿಭಟನೆಯನ್ನು ಹೋರಾಟಗಾರ್ತಿ ದಯಾಬಾಯಿ ಉದ್ಘಾಟಿಸಿದರು. ಎಂಡೋಸಲ್ಫಾನ್ ಸಂತ್ರಸ್ಥ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಳಿಗ್ಗೆ 10 ರಿಂದ ಸಂಜೆ ನಾಲ್ಕು ಗಂಟೆ ತನಕ ಧರಣಿ ನಡೆಯಲಿದೆ. ಬೇಡಿಕೆ ಈಡೇರಿಸದಿದ್ದಲ್ಲಿ ಮಾರ್ಚ್ 15 ರಿಂದ ತಿರುವನಂತಪುರದಲ್ಲಿರುವ ಸೆಕ್ರಟರಿಯಟ್ ಮುಂಭಾಗದಲ್ಲಿ ಅನಿರ್ಧಿಷ್ಟಾದಧಿ ಮುಷ್ಕರ ನಡೆಸುವ ಮೂಲಕ ಉಗ್ರ ಹೋರಾಟಕ್ಕೆ ಎಂಡೋ ಸಂತ್ರಸ್ತರು ತೀರ್ಮಾನಿಸಿದ್ದಾರೆ. ಸಂತ್ರಸ್ತರ ನ್ನು ರಾಜ್ಯ ಸರಕಾರ ನಿರ್ಲಕ್ಷಿಸಿದ್ದು, ಸಂತ್ರಸ್ತರಿಗೆ ಲಭಿಸಬೇಕಾದ ಸವಲತ್ತು, ವೈದ್ಯಕೀಯ ಸೌಲಭ್ಯ ಲಭಿಸುತ್ತಿಲ್ಲ. ಸಂತ್ರಸ್ತ ಪಟ್ಟಿಯಿಂದ ಅರ್ಹರನ್ನು ಕೈಬಿಡಲಾಗಿದ್ದು ಇದನ್ನು ಪ್ರತಿಭಟಿಸಿ ಧರಣಿ ನಡೆಯುತ್ತಿದೆ.