ಟ್ರಾಫಿಕ್ ಜಂಕ್ಷನ್ನಲ್ಲೋ, ಸಿಗ್ನಲ್ನಲ್ಲೋ ನಿಂತಿದ್ದಾಗ ಭಿಕ್ಷುಕ ಬಂದು, ನಿಮ್ಮ ಕಾರಿನ ಕಿಟಕಿ ಬಡಿದಾಗ, ಅಯ್ಯೋ ಪಾಪ ಎಂದೆನಿಸಿ ಭಿಕ್ಷೆ ನೀಡಿದ್ರೆ ಅದು ಇನ್ನು ಮುಂದೆ ಅಪರಾಧವಾಗಲಿದೆ. ಖಾಸಗಿ ಕಾರಲ್ಲಿ ಹಿಂಬದಿ ಸೀಟಲ್ಲಿ ಕೂರುವ ಮಕ್ಕಳಿಗೂ ಖುಷಿಯಾಗಲಿ ಎಂದು ಡಿವಿಡಿ ಸ್ಕ್ರೀನ್ ಅಳವಡಿಸುವಂತಿಲ್ಲ. ಮೋಟಾರು ವಾಹನಗಳ ಕಾಯ್ದೆ ಪ್ರಕಾರ ಇದು ಸಂಚಾರ ನಿಯಮಗಳ ಉಲ್ಲಂಘನೆಯಾಗುತ್ತದೆ. ನೀವು ಮಾಡಿದ ಈ ತಪ್ಪಿಗೆ ದಂಡವನ್ನೂ ತೆರಬೇಕಾಗುತ್ತದೆ. ಇಷ್ಟು ಮಾತ್ರವಲ್ಲ, ಅಪಘಾತವಾದಲ್ಲಿ ಕಾರು ಮತ್ತಿತರ ವಾಹನಗಳಿಗೆ ರಕ್ಷಣೆಗಾಗಿ ಹಾಕುವ ಕ್ರ್ಯಾಶ್ ಗಾರ್ಡ್ ಮತ್ತು ಬುಲ್ ಗಾರ್ಡ್ ಅಳವಡಿಕೆ ವಿರುದ್ಧವೂ ಕ್ರಮ ಕೈಗೊಳ್ಳಲು ಅವಕಾಶವಿದೆ. ನಿಯಮ ಪ್ರಕಾರ, 1 ಸಾವಿರ ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಸದ್ಯ ಹೊಸದಿಲ್ಲಿಯಿಂದಲೇ ಈ ನಿಯಮಗಳು ಜಾರಿಗೆ ಬರಲಿವೆ.