ಕುಂದಾಪುರ,ಜ 20 (Daijiworld News/MSP): ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಶನ್(ರಿ) ಮಂಗಳೂರು ಇರು ರಾಜ್ಯ ಹೊಲಿಗೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಕಾರ್ಮಿಕ ಸಚಿವ ಸುರೇಶ್ ಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಟೈಲರ್ಸ್ಸ್ ಅಸೋಸಿಯೇಶನ್ ಸದಸ್ಯರು, "ಕರ್ನಾಟಕ ರಾಜ್ಯದಲ್ಲಿ ಹೊಲಿಗೆ ಕೆಲಸದಿಂದ ಜೀವನ ಸಾಗಿಸುತ್ತಿರುವ ಸುಮಾರು 20 ಲಕ್ಷಕ್ಕೂ ಹೆಚ್ಚು ಸ್ತ್ರೀ ಪುರುಷ ಹೊಲಿಗೆ ಕಲಸಗಾರರಿಗೆ ಜೀವನ ಭದ್ರತೆಯನ್ನು ಒದಗಿಸಲು ಕಳೆದ 20 ವರ್ಷಗಳಿಂದ ಮನವಿ ಹಾಗೂ ಶಾಂತ ರೀತಿಯ ಚಳುವಳಿಗಳ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದೇವೆ. ಮತ್ತು ಕೇಂದ್ರ ಸರ್ಕಾರಕ್ಕೂ ಈ ಮೂಲಕ ಮನವಿ ಮಾಡುತ್ತಾ ಬಂದಿದ್ದೇವೆ. ಈ ನಿಟ್ಟಿನಲ್ಲಿ ಕೆಎಸ್ಟಿಎ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರವು ’ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ಧನ್ ಯೋಜನೆ’ಯಲ್ಲಿ ಪಿಂಚಣಿ ಯೋಜನೆ ಜ್ಯಾರಿಗೆ ತಂದಿರುವುದು ಸಂತಸ ನೀಡಿದ್ದು, ಈ ಯೋಜನೆಯಲ್ಲಿ ಸಣ್ಣಪುಟ್ಟ ತಿದ್ದುಪಡಿಗಳು ಅಗತ್ಯವಿದೆ ಎಂದು ಅವರು ತಿಳಿಸಿದರು.
ಪ್ರಸ್ತುತ ಯೋಜನೆಯಲ್ಲಿ 18 ರಿಂದ 40 ವರ್ಷದವರಿಗೆ ಮಾತ್ರ ಅವಕಾಶವಿದ್ದು, ಅದನ್ನು 55 ವರ್ಷದವರೆಗೆ ವಿಸ್ತರಿಸಬೇಕು. ಈಗ ಕೇಂದ್ರ ಸರ್ಕಾರ ಮಾತ್ರ ವಂತಿಗೆ ನೀಡುತ್ತಿದ್ದು, ಅದನ್ನು ರಾಜ್ಯ ಸರ್ಕಾರವೂ ಫಲಾನುಭವಿ ನೀಡುವ ವಂತಿಗೆ ಮೊತ್ತಕ್ಕೆ ಸಮಾನಾಂತರ ವಂತಿಗೆ ನೀಡಬೇಕು. ಹೊಲಿಗೆ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡಬೇಕು. ಮಹಿಳಾ ವೃತ್ತಿ ಬಾಂಧವರ ಹೆಣ್ಣು ಮಕ್ಕಳಿಗೆ ವಿವಾಹ ಧನ ಮತ್ತು ಹೆರಿಗೆ ಭತ್ತೆ ನೀಡಬೇಕು. ಹೊಲಿಗೆ ಕಾರ್ಮಿಕರಿಗೆ ವಿಮಾ ಯೋಜನೆ ಮತ್ತು ಆರೋಗ್ಯ ಕಾರ್ಡ್ ಜಾರಿಗೊಳಿಸಬೇಕು ಎನ್ನುವ ಬೇಡಿಕೆಗಳನ್ನು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಹಾಗೂ ಕಾರ್ಮಿಕ ಸಚಿವರಿಗೆ ಸಲ್ಲಿಸಲಾಯಿತು.
ಮುಜರಾಯಿ, ಬಂದರು ಹಾಗೂ ಮೀನುಗಾರಿಕೆ ಮತ್ತು ಒಳನಾಡು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬೈಂದೂರು ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು ನೃತೃತ್ವದಲ್ಲಿ ಕೆಎಸ್ಟಿಎ ರಾಜ್ಯಾಧ್ಯಕ್ಷ ಕೆ.ಎಸ್ ಆನಂದ್, ಉಪಾಧ್ಯಕ್ಷರಾದ ರಾಘೆವೇಂದ್ರ ಯು,ಕೆ, ಹಾಗೂ ಸುರೇಶ್ ಸಾಲ್ಯಾನ್, ಕಾರ್ಯದರ್ಶಿ ಬಿ. ವಸಂತ್, ಮಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಪ್ರಜ್ವಲ್, ಉಡುಪಿ ಘಟಕಾಧ್ಯಕ್ಷ ರಾಮಚಂದ್ರ, ಕುಂದಾಪುರ ಘಟಕಾಧ್ಯಕ್ಷ ಚಂದ್ರಶೇಖರ್(ಕೃಷ್ಣಟೈಲರ್), ಮಧುಸೂಧನ ಆಚಾರ್ಯ, ಕುಸುಮಾ ದೇವಾಡಿಗ, ನಿಯೋಗದಲ್ಲಿದ್ದರು.
ಸಿ.ಎಂ ಭರವಸೆ:
ಕೆಎಸ್ಟಿಎ ನಿಯೋಗ ಸಲ್ಲಿಸಿದ ಬೇಡಿಕೆಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಮುಂದಿನ ಬಜೆಟ್ನಲ್ಲಿ ಹೊಲಿಗೆ ಕಾರ್ಮಿಕರ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ನಿಯೋಗ ತಿಳಿಸಿದೆ.