ಕುಂದಾಪುರ, ಜ 30 : ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ತಮ್ಮ ಶಾಸಕ ಸ್ಥಾನಕ್ಕೆ ಜ ೩೦ ರ ಮಂಗಳವಾರ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಮಂಗಳವಾರ ವಿಧಾನಸಭಾ ಸ್ಪೀಕರ್ ಕೋಳಿವಾಡರಿರುವ ರಾಣಿಬೆನ್ನೂರು ಕಡೆಗೆ ಹಾಲಾಡಿ ಪ್ರಯಾಣ ಬೆಳೆಸಿದ್ದು ಇಂದು ಸಂಜೆ ವೇಳೆ ರಾಣಿ ಬೆನ್ನೂರಿನ ಐಬಿಯಲ್ಲಿ ಸ್ಪೀಕರ್ ಕೋಳಿವಾಡರೊಂದಿಗೆ ಭೇಟಿಗೆ ಸಮಯ ನಿಗದಿಪಡಿಸಿರುವುದಾಗಿ ತಿಳಿದು ಬಂದಿದೆ. ಬಹಳ ದಿನಗಳಿಂದ ಹಾಲಾಡಿ ನಡೆ ಕುರಿತು ಕುಂದಾಪುರ ರಾಜಕೀಯ ವಲಯದಲ್ಲಿದ್ದ ಕುತೂಹಲಕ್ಕೆ ತೆರೆ ಬಿದ್ದಿದ್ದು. ಸ್ಪೀಕರ್ ತಮ್ಮ ರಾಜೀನಾಮೆಯನ್ನ ಅಂಗೀಕರಿಸಿದ ಬಳಿಕ ಬಿಜೆಪಿಯನ್ನ ಸೇರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಜಾವ್ಡೇಕರ್ ಮತ್ತು ಹಾಲಾಡಿ ನಡುವೆ ಗುಪ್ತ ಸಮಾಲೋಚನೆ?
ಇತ್ತಿಚಿಗೆ ಉಡುಪಿಗೆ ಬಂದಿದ್ದ ಬಿಜೆಪಿ ಮುಖಂಡ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನ ಮನೆಯಲ್ಲಿ ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು. ಭೇಟಿಯ ಸಂದರ್ಭ ಕುಂದಾಪುರ ವಿಧಾನಸಭಾ ಕ್ಷೇತ್ರದ ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿದ್ದು, ಜನವರಿ ಅಂತ್ಯದೊಳಗೆ ಬಿಜೆಪಿ ಸೇರುವಂತೆ ಸೂಚಿಸಿರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ತಾಂತ್ರಿಕ ಕಾರಣದಿಂದ ರಾಜೀನಾಮೆ ಸಲ್ಲಿಸಿರಲಿಲ್ಲ
ಶಾಸಕನಾದವರು ಯಾವುದೇ ಪಕ್ಷಾಂತರ ಮಾಡುವುದಾದಲ್ಲಿ ಚುನಾವಣೆ ನಡೆದ ಆರು ತಿಂಗಳಿನೊಳಗೆ ಮಾಡಬೇಕು. ಇಲ್ಲವಾದಲ್ಲಿ ಪಕ್ಷಾಂತರ ಕಾಯ್ದೆಯಡಿ ಶಾಸಕತ್ವ ಅನರ್ಹವಾಗುತ್ತದೆ. ಈ ಹಿನ್ನೆಲೆ ಕಳೆದ ಒಂದೆರಡು ವರ್ಷಗಳಿಂದಲೂ ತಮ್ಮ ನಿಲುವಿನ ಬಗ್ಗೆ ಸ್ಪಷ್ಟ ನಿರ್ಧಾರ ತಿಳಿಸದ ಹಾಲಾಡಿ 2017ರ ನವೆಂಬರ್ ತಿಂಗಳಲ್ಲಿ ಕುಂದಾಪುರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಬಿಜೆಪಿಗೆ ನಾನು ಕೆಲವೇ ತಿಂಗಳುಗಳಲ್ಲಿ ಸೇರ್ಪಡೆಗೊಳ್ಳುವುದಾಗಿ ತಿಳಿಸಿದ್ದರು. ಬಳಿಕ ಕುಂದಾಪುರದಲ್ಲಿ ನಡೆದ ಬಿಜೆಪಿಯ ಪರಿವರ್ತನಾ ರ್ಯಾಲಿಯಲ್ಲಿ ಕೂಡ ಭಾಗವಹಿಸಿ ತಮ್ಮ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ತಮ್ಮ ಶಕ್ತಿ ಪ್ರದರ್ಶನ ಕೂಡ ಮಾಡಿದ್ದರು. ಈ ಸಮಾವೇಶದಲ್ಲಿ ಹಾಲಾಡಿ ವಿರೋಧಿ ಬಣದವರು ಬಿಎಸ್ವೈ ಮಾತನಾಡುವ ಸಂದರ್ಭ ಹಾಲಾಡಿ ವಿರುದ್ಧ ಫಲಕವನ್ನ ಹಿಡಿದಾಗ ಕುಂದಾಪುರ ವಿ.ಸ ಕ್ಷೇತ್ರದ ಮುಂದಿನ ಶಾಸಕ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟರೇ, ಅವರನ್ನ ವಿರೋಧಿಸುವವರು ಪಕ್ಷ ಬಿಟ್ಟು ತೆರಳಿ ಎಂದು ಬಿಎಸ್ವೈ ಘೋಷಿಸಿದ್ದರು.
ಹಾಲಾಡಿ ಬಿಜೆಪಿ ಸೇರ್ಪಡೆಗೆ ಪಕ್ಷದಲ್ಲೇ ವಿರೋಧ
ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆಗೆ ಪಕ್ಷದಲ್ಲೇ ವಿರೋಧವಿದೆ. ಮೂಲ ಬಿಜೆಪಿಗರು ಎಂದು ಗುರುತಿಸಿಕೊಂಡವರು ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದು. 20 ವರ್ಷ ಶಾಸಕರಾಗಿ ಸೇವೆ ಸಲ್ಲಿಸಿ ಏನು ಮಾಡದೇ ಇರುವುದು ಸಾಕಾಗಿಲ್ಲವಾ ಎನ್ನುವ ಪ್ರಶ್ನೆಯನ್ನ ವಾಟ್ಸಪ್ ಫೇಸ್ಬುಕ್ಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಹಾಲಾಡಿ ಮುಂದಿನ ನಡೆ!
ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಮುಂದಿನ ನಡೆ ಬಿಜೆಪಿ ಕಡೆಗೆ ಎನ್ನುವುದು ಸ್ಪಷ್ಟವಾಗಿದೆ. ಅವರೇ ಹೇಳುವ ಪ್ರಕಾರ ಸ್ಪೀಕರ್ ಕೋಳಿವಾಡ ತಮ್ಮ ರಾಜೀನಾಮೆ ಅಂಗೀಕಾರ ಮಾಡಿದ ಬಳಿಕ ಬೆಂಗಳೂರಿನಲ್ಲಿ ಬಿಜೆಪಿಯನ್ನ ಸೇರ್ಪಡೆಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗಳನ್ನ ರಾಜೀನಾಮೆ ಅಂಗಿಕಾರದ ಬಳಿಕ ನೀಡುವುದಾಗಿ ತಿಳಿಸಿದ್ದಾರೆ.