ಕುಂದಾಪುರ, ಜ 20(DaijiworldNews/SM): ಕೋಟದಲ್ಲಿ 2019ರ ಜನವರಿ 26ರಂದು ನಡೆದಿದ್ದ ಯತೀಶ್ ಕಾಂಚನ್ ಹಾಗೂ ಭರತ್ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಗೆ ಹೈ ಕೋರ್ಟ್ ಜಾಮೀನು ದೊರೆಯುತ್ತಿದ್ದಂತೆ ಕೊಲೆಯಾದ ಭರತ್ನ ಬಡ ತಾಯಿ ಪಾರ್ವತಿ ದಿಟ್ಟವಾಗಿ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದು, ಜಿಲ್ಲಾ ಪಂಚಾಯತ್ ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ವಜಾಗೊಳಿಸಿ ಆದೇಶ ನೀಡಿದೆ.
ಅಂದು ನಡೆದ ಬರ್ಬರ ಹತ್ಯೆಗೆ ಇಡೀ ಕರಾವಳಿ ಮಾತ್ರವಲ್ಲ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಕರಾವಳಿಯಲ್ಲಿ ಮೊದಲ ಬಾರಿಗೆ ಹತ್ಯಾ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ಪೊಲಿಸರು ಶಾಮೀಲಾಗಿದ್ದು ಬೆಳಕಿಗೆ ಬಂದ ಪ್ರಕರಣ ಇದಾಗಿತ್ತು. ಅಲ್ಲದೇ ಜಿಲ್ಲಾ ಪಂಚಾಯಿತಿ ಸದಸ್ಯರು ಕೊಲೆಗೆ ಸಂಚು ಹೂಡಿದ್ದರು ಎಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ರಾಘವೇಂದ್ರ ಕಾಂಚನ್ ಅವರನ್ನು ಆರೋಪಿಯನ್ನಾಗಿ ಮಾಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೆಳ ನ್ಯಾಯಾಲಯದಲ್ಲಿ ಜಾಮೀನು ದೊರೆಯದಿದ್ದ ಕಾರಣಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಹೈಕೋರ್ಟಿನ ಮೊರೆ ಹೋಗಿ ಅಲ್ಲಿ ಶರತ್ತು ಬದ್ದ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದಾದ ಬಳಿಕ ಆರು ಆರೋಪಿಗಳಿಗೆ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಉಚ್ಛ ನ್ಯಾಯಾಲಯದಲ್ಲಿ ಜಾಮೀನು ದೊರಕುತ್ತಿದ್ದಂತೆ ಹತ್ಯೆಯಾದ ಭರತನ ತಾಯಿ ಪಾರ್ವತಿ, ತನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಲು ಟೊಂಕ ಕಟ್ಟಿದ್ದು, ಕಡು ಬಡತನದಲ್ಲಿ ಬೇಯುತ್ತಿರುವ ಭರತನ ತಾಯಿ ಪಾರ್ವತಿ ಆರೋಪಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಪಾರ್ವತಿಯವರ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಜಾಮೀನು ವಜಾಗೊಳಿಸಿ ಆದೇಶ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ. ಸುಪ್ರೀಂ ಕೋರ್ಟಿನಲ್ಲಿ ಸಂತ್ರಸ್ಥೆ ಪಾರ್ವತಿ ಪರ ಸುಪ್ರೀಂ ಕೋರ್ಟ್ ವಕೀಲ ಚಂದ್ರಶೇಖರ್ ವಾದ ಮಂಡಿಸಿದ್ದರು.
ಆ ಮೂಲಕ ಕರಾವಳಿಯ ಗ್ರಾಮೀಣ ಭಾಗದ ಕೊಲೆ ಪ್ರಕರಣವೊಂದು ರಾಜಕೀಯದ ಒತ್ತಡಗಳ ನಡುವೆಯೂ ಸರ್ವೋಚ್ಚ ನ್ಯಾಯಾಲಯದಲ್ಲಿ ತನಿಖೆಗೆ ಅಂಗೀಕಾರವಾಗಿ, ಸಂತ್ರಸ್ಥೆಗೆ ನ್ಯಾಯ ದೊರಕಿರುವುದು ಇದೇ ಮೊದಲು ಎನ್ನಲಾಗಿದೆ.