ಮಂಗಳೂರು, ಜ 21 (Daijiworld News/MB) : ಸೋಮವಾರ ಮಂಗಳೂರು ವಿಮಾಣ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಶಂಕಿತ ವ್ಯಕ್ತಿ ಕದ್ರಿ ಮಂಜುನಾಥೇಶ್ವರ ದೇವಸ್ಥನಕ್ಕೂ ಹೋಗಲು ಯತ್ನಿಸಿದ್ದಾನೆ ಎಂದು ತನಿಖೆಯ ವೇಳೆ ತಿಳಿದು ಬಂದಿರುವುದಾಗಿ ವರದಿಯಾಗಿದೆ.
ಆರೋಪಿಯು ಕೆಂಜಾರುವೆರೆಗೆ ಬಸ್ನಲ್ಲಿ ಬಂದಿದ್ದು ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಬೇರೆ ವಾಹನದಲ್ಲಿ ಹೋಗಿ ಬಾಂಬ್ ಇರಿಸಿ ನಡೆದುಕೊಂಡು ಕೆಂಜಾರುವಿಗೆ ಬಂದಿದ್ದಾನೆ ಎಂದು ಹೇಳಲಾಗಿದೆ.
ಬೇರೆ ಪ್ರಯಾಣಿಕರೊಬ್ಬರನ್ನು ಕರೆತಂದಿದ್ದ ಆಟೊರಿಕ್ಷಾ ಕೆಂಜಾರು ಪ್ರದೇಶಕ್ಕೆ ಬಂದ ಸಂದರ್ಭದಲ್ಲಿ ಶಂಕಿತ ವ್ಯಕ್ತಿ ಆಟೊರಿಕ್ಷಾ ನಿಲ್ಲಿಸಿ, "ಕದ್ರಿ ದೇವಸ್ಥಾನಕ್ಕೆ ಬಿಡುತ್ತೀರಾ?" ಎಂದು ಕೇಳಿದ್ದಾನೆ ಎನ್ನಲಾಗಿದೆ.
ಆಟೊ ಚಾಲಕ ಹೇಳಿದ ಮೊತ್ತಕ್ಕೆ ಒಪ್ಪದೇ ಪಂಪ್ವೆಲ್ವರೆಗೆ ಮಾತ್ರ ಆಟೊದಲ್ಲಿ ಹೋಗಿ ಅಲ್ಲಿ ಇಳಿದು ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗಿದೆ. ಪೊಲೀಸರು ಆಟೊ ಚಾಲಕನನ್ನು ಪತ್ತೆ ಮಾಡಿದ್ದು ತೀವ್ರ ವಿಚಾರಣೆ ನಡೆಸಿದ್ದು ತನಿಖಾ ತಂಡಕ್ಕೆ ಚಾಲಕ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಶಂಕಿತ ವ್ಯಕ್ತಿಯು ತುಳು ಭಾಷೆಯಲ್ಲಿ ತನ್ನೊಂದಿಗೆ ಮಾತನಾಡಿದ್ದಾನೆ. ವಾಪಾಸ್ ಹೋಗುವ ಸಂದರ್ಭದಲ್ಲೂ ಆತನ ಬಳಿ ಬ್ಯಾಗ್ ಇತ್ತು ಎಂದು ಆಟೊರಿಕ್ಷಾ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.