ಕಾಸರಗೋಡು, ಜ 21 (Daijiworld News/MB) : ಮೀಯಪದವು ವಿದ್ಯಾವರ್ಧಕ ಪ್ರೌಢಶಾಲೆಯ ಶಿಕ್ಷಕಿ ರೂಪಾಶ್ರೀ ಬಿ.ಕೆ. ಅವರ ನಿಗೂಢ ಸಾವಿನ ಕುರಿತು ತನಿಖೆಗೆ ಒತ್ತಾಯಿಸಿ ಹೋರಾಟ ತೀವ್ರಗೊಳ್ಳುತ್ತಿದ್ದು , ಮೀಂಜ ಜನಪರ ವೇದಿಕೆಯ ನೇತೃತ್ವದಲ್ಲಿ ಇಂದು ಬೆಳಗ್ಗೆ ಶಾಲೆ ಗೆ ಮುತ್ತಿಗೆ ಹಾಕಲೆತ್ನಿಸಿದ್ದು , ಬಳಿಕ ಪ್ರತಿಭಟನಾಕಾರರು ಶಾಲಾ ಗೇಟ್ ಮುಂಭಾಗದಲ್ಲಿ ಧರಣಿ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರರು ನ್ಯಾಯಕ್ಕಾಗಿ ಒತ್ತಾಯಿಸಿದರು.
ವಿದ್ಯಾವರ್ಧಕ ಪ್ರೌಢಶಾಲೆಯ ಎದುರು ಧರಣಿನಿರತ ವಿದ್ಯಾರ್ಥಿಗಳು, ಅವರ ಪೋಷಕರು ಶಿಕ್ಷಕಿಯ ಸಾವಿನ ಹಿಂದೆ ನಿಗೂಢತೆ ಇದ್ದು, ಅವರಿಗೆ ಶಾಲೆಯಲ್ಲಿ ಕಿರುಕುಳ ನೀಡುತ್ತಿದ್ದ ಶಿಕ್ಷಕರೊಬ್ಬರನ್ನು ವಜಾ ಮಾಡಬೇಕು, ಆತನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳ ಪದಾಧಿಕಾರಿಗಳ ಸಹಿತ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಧರಣಿ ನಿರತರು ನ್ಯಾಯಕ್ಕಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಶಾಲಾ ಆವರಣದೊಳಗೆ ನುಗ್ಗಲೆತ್ನಿಸಿದ ಧರಣಿ ನಿರತರನ್ನು ಪೊಲೀಸರು ತಡೆದರು.
ಜಯರಾಮ ಬಲ್ಲಂಗುಡೇಲು, ಕುಂಞಿ, ಶುಕೂರು, ವಹೀದ್, ದಯಾಕರ ಮಾಡ, ಅಲಿ ಹಾಗೂ ಇನ್ನಿತರರು ಧರಣಿಯ ನೇತೃತ್ವ ವಹಿಸಿದ್ದರು.
ಜನವರಿ 16 ರಿಂದ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದ ಚಿಗುರುಪಾದೆ ನಿವಾಸಿ ರೂಪಾಶ್ರೀ ಬಿ.ಕೆ.(40) ಅವರ ಮೃತದೇಹ ಜ.18ರಂದು ಬೆಳಗ್ಗೆ ಕುಂಬಳೆ ಸಮೀಪದ ಪೆರುವಾಡ್ ಸಮುದ್ರ ತೀರದಲ್ಲಿ ರೀತಿಯಲ್ಲಿ ಪತ್ತೆಯಾಗಿತ್ತು.