ಉಳ್ಳಾಲ, ಜ 21 (DaijiworldNews/SM): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೊಕ್ಕೊಟ್ಟುವಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದ ಜನತೆಗೆ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಬಾಂಬ್ ಪತ್ತೆ ಪ್ರಕರಣದ ವಾಸ್ತವಾಂಶವನ್ನು ಬಹಿರಂಗಪಡಿಸಿ ಎಂಬುವುದಾಗಿ ಮಾಜಿ ಸಿಎಂ ಹೆಚ್ಡಿಕೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಕಬ್ಬಿಣದ ಪೆಟ್ಟಿಗೆಯಲ್ಲಿ ಪಟಾಕಿಗೆ ತುಂಬುವ ಮಿಣಿಮಿಣಿಯಾ ಪೌಡರ್ ತುಂಬಿದ್ದರು ಎಂಬುವುದಾಗಿ ಪತ್ರಿಕೆಗಳೇ ವರದಿ ಮಾಡಿದೆ. ಮಂಗಳೂರಿನಲ್ಲಿ ಬಾಂಬ್ ಸ್ಫೋಟಿಸುವಂತಹ ಯಾವುದೇ ಲಕ್ಷಣಗಳಿಲ್ಲ. ಬಾಂಬ್ ನಿಷ್ಕ್ರಿಯಗೊಳಿಸಲು ದೊಡ್ಡ ಕಂಟೈನರ್ ಬಳಸಲಾಗಿದೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ಸಂದರ್ಭ ಅಣುಕು ಪ್ರದರ್ಶನ ಮಾಡಲಾಗಿದೆ. ಬಜ್ಪೆ ಬಾಂಬ್ ಪತ್ತೆ ಘಟನೆ ಒಂದು ಅಣುಕು ಪ್ರದರ್ಶನ ಎಂದ ಅವರು, ಬಾಂಬ್ ಹೆಸರಲ್ಲಿ ಸಮಾಜ, ಧರ್ಮದ ಮಧ್ಯೆ ಅಶಾಂತಿಯ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದರು.
ಇನ್ನು ಮಂಗಳೂರು-ಕುಮಾರಸ್ವಾಮಿ ಸಂಬಂಧದ ಬಗ್ಗೆ ಶೋಭಾ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಮಂಗಳೂರಿನಲ್ಲಿ ಭೀತಿಯ ವಾತಾವರಣ ಬಿಟ್ಟುಬಿಡಿ ಆಗ ನನಗೆ ಯಾವುದೇ ಕೆಲಸ ಇರುವುದಿಲ್ಲ. ವಿಶ್ವಕ್ಕೆ ಸ್ಪರ್ಧೆ ಕೊಡುವಂತಹ ಮಂಗಳೂರು ನಗರ ಹಾಳು ಮಾಡದಿರಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ನಗರದ ಜನತೆ ಇಂತಹ ಪಕ್ಷಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಿದೆ ಎಂಬುವುದಾಗಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಅಲ್ಲದೆ, ಮಕ್ಕಳ ಭವಿಷ್ಯದ ಕುರಿತು ಜನತೆ ಜಾಗೃತರಾಗಿರಬೇಕಿದೆ. ಜನರ ಮನಸ್ಸು ಒಗ್ಗೂಡಿಸಲು ಮಂಗಳೂರಿಗೆ ಭೇಟಿ ನೀಡಿದ್ದೇನೆ ಎಂದ ಅವರು, ಮಂಗಳೂರಿನ ಪತ್ತೆಯಾಗಿರುವುದು ಸಜೀವ ಬಾಂಬ್ ಅಲ್ಲ, ಉದ್ದೇಶಪೂರ್ವಕವಾಗಿ ನಡೆಸಿರುವ ಸಣ್ಣ ಕೃತ್ಯ ಎಂದಿದ್ದಾರೆ.