ಕಾಸರಗೋಡು, ಜ 21 (DaijiworldNews/SM): ಗಡಿನಾಡ ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡೇತರ ಶಿಕ್ಷಕರ ನೇಮಕ ಮತ್ತೆ ಪ್ರತಿಭಟನೆಗೆ ವೇದಿಕೆಯಾಗುತ್ತಿದೆ. ಬೇಕಲ ಫಿಶರಿಸ್ ಸರಕಾರಿ ಶಾಲೆಯ ಕನ್ನಡ ವಿಭಾಗದ ಸೋಶಿಯಲ್ ಸಯನ್ಸ್ ವಿಷಯಕ್ಕೆ ತಿರುವನಂತಪುರ ಮೂಲದ ಕನ್ನಡ ಅರಿಯದ ಶಿಕ್ಷಕಿ ತರಗತಿಗೆ ಹಾಜರಾದ ಹಿನ್ನೆಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳು ಹಾಗೂ ಪೋಷಕರು ಜಿಲ್ಲಾಕಾರಿ ಡಾ. ಡಿ. ಸಜಿತ್ ಬಾಬು ಹಾಗೂ ಶಿಕ್ಷಣ ಉಪನಿರ್ದೇಶಕಿ ಪುಷ್ಪಾ ಅವರಿಗೆ ಮನವಿ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಶಿಕ್ಷಣ ಇಲಾಖಾ ಉಪನಿರ್ದೇಶಕರು ರಜೆಯಲ್ಲಿ ತೆರಳಲು ಆದೇಶ ನೀಡಿದ್ದರು. ಆದರೆ ಅದಕ್ಕೆ ಮನ್ನಣೆ ನೀಡದ ಶಿಕ್ಷಕಿ ಮಂಗಳವಾರ ಮತ್ತೆ ತರಗತಿಗೆ ಹಾಜರಾಗಲು ಆಗಮಿಸಿದ್ದ ಹಿನ್ನೆಲೆಯಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಾನ್ ವಾಜ್ ಪಾದೂರು ಈ ಅಧ್ಯಾಪಕಿ ಶಾಲೆಗೆ ಹಾಜರಾದರೆ ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಸೋಮವಾರವೇ ತಿಳಿಸಿದ್ದರು.
ತಿರುವನಂತಪುರದ ಸೆಕ್ರೆಟರಿಯೇಟ್ನ ಉನ್ನತ ಅಧಿಕಾರಿಯ ನಿರ್ದೇಶನದ ಪ್ರಕಾರ ಯಾವ ಕಾರಣಕ್ಕೂ ರಜೆಯಲ್ಲಿ ತೆರಳಬಾರದೆಂಬ ನಿರ್ದೇಶನನುಸರ ಹಠ ಹಿಡಿದು ಶಾಲೆಗೆ ಮಂಗಳವಾರ ಮತ್ತೆ ಹಾಜರಾದರು. ಆದರೆ ಶಾಲೆಯಲ್ಲಿ ಶಾನವಾಜ್ ಪಾದೂರು, ಜಿಲ್ಲಾ ಪಂಚಾಯತ್ ಸದಸ್ಯ ಕೆ. ಶ್ರೀಕಾಂತ್ ನೇತೃತ್ವದ ಜನಪ್ರತಿನಿಗಳು, ವಿದ್ಯಾರ್ಥಿಗಳ ಹೆತ್ತವರು, ವಿದ್ಯಾರ್ಥಿಗಳು, ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಕಾಸರಗೋಡು ಮತ್ತಿರರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ವಿದ್ಯಾರ್ಥಿಗಳು ಅಧ್ಯಾಪಕಿಯನ್ನು ತರಗತಿಗೆ ಪ್ರವೇಶಿಸದಂತೆ ತಡೆದರು. ಈ ಸಂದರ್ಭದಲ್ಲಿ ಅಧ್ಯಾಪಕಿ ಹಾಗೂ ಜನಪ್ರತಿನಿಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ಯಾವ ಕಾರಣಕ್ಕೂ ರಜೆಯಲ್ಲಿ ತೆರಳುವುದಿಲ್ಲ ಎಂಬುದಾಗಿ ಮತ್ತೆ ಹಠ ಹಿಡಿದರು. ಆದರೆ ಒತ್ತಡಕ್ಕೆ ಸಿಲುಕಿದ ಶಿಕ್ಷಕಿ 45 ದಿನಗಳ ರಜೆಯಲ್ಲಿ ತೆರಳುವುದಾಗಿ ಒಪ್ಪಿದ್ದಾರೆ.
ಕಳೆದ ದಿನ ಬೇಕಲ ಫಿಶರೀಸ್ ಸರಕಾರಿ ಶಾಲೆಯ ಎಂಟು, ಒಂಭತ್ತು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಶಿಕ್ಷಣ ಉಪನಿರ್ದೇಶಕರ ಮುಂದೆ ಮನವಿ ಸಲ್ಲಿಸಿದರು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದ್ದರು.