ಉಡುಪಿ, ಜ 21 (DaijiworldNews/SM): ವಿಶ್ವದ ಯಾವುದೇ ದೇಶದಲ್ಲಿಯೂ ಕಾಣ ಸಿಗದ ವೈವಿದ್ಯತೆ, ಧಾರ್ಮಿಕ ಸಹಿಷ್ಣುತೆ, ಸರ್ವರನ್ನೂ ಮುಕ್ತವಾಗಿ ಪ್ರೀತಿಸಿ ಪೋಷಿಸುವ ಸಂಸ್ಕ್ರತಿ ನಮ್ಮ ಭರತ ಖಂಡದಲ್ಲಿದೆ. ನಮ್ಮ ದೇಶದ ಸಂವಿಧಾನದ ರಚನೆಗಳು ಮತ್ತದರ ಒಳ ತಿರುಳುಗಳು ಅತ್ಯಂತ ಯೋಜನಾ ಬದ್ದವಾಗಿ ರೂಪು ಗೊಂಡಿದ್ದು ಇಡೀ ಜಗತ್ತಿನಲ್ಲಿಯೇ ಪ್ರಶಂಸಾರ್ಹವಾಗಿದೆ. ಪೌರತ್ವ ತಿದ್ದುಪಡಿ ಕಾಯಿದೆ 2019 ಸಂವಿಧಾನ ಬದ್ಧವಾಗಿಯೇ ಅನುಮೋದನೆ ಗೊಂಡಿದ್ದು ಯಾವುದೇ ಧಾರ್ಮಿಕ ನೆಲೆಯಲ್ಲಿ ಅಥವಾ ಯಾವುದೇ ವರ್ಗವನ್ನು ಗುರಿಯಾಗಿಸಿಕೊಂಡು ಕಾರ್ಯರೂಪಕ್ಕೆ ತಂದಿದ್ದಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ಹಾಗೂ ಎನ್ಆರ್ ಸಿ ಬಗ್ಗೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. “ಭಾರತ ದೇಶದ ಪುಣ್ಯ ಭೂಮಿಯು ಯಾವುದೇ ಕೌಟುಂಬಿಕ ತಲೆಮಾರಿನ ಬಳುವಳಿಯಲ್ಲ ಹಾಗೂ ಇಲ್ಲಿ ತಮ್ಮಿಷ್ಟ ಬಂದಂತೆ ಉಪಯೋಗಿಸಲು ಅವಕಾಶಗಳಿಲ್ಲ” ಎಂದು ತಿಳಿದುಕೊಳ್ಳಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆಯವರು ಸ್ಪಷ್ಟ ಪಡಿಸಿದರು.
ಇನ್ನು ಈ ನಡುವೆ ಪೌರತ್ವ ತಿದ್ದುಪಡಿ ಕಾಯಿದೆ 2019 ಬೆಂಬಲಿಸಿ ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ಚಾಲನೆ ಕೂಡ ಸಂಸದೆ ಶೋಭಾ ಕರಂದ್ಲಾಜೆ ನೀಡಿದ್ದಾರೆ.
ಈಗಾಗಲೇ ಪೌರತ್ವ ತಿದ್ದುಪಡಿ ವಿರುದ್ಧ ದೇಶದೆಲ್ಲೆಡೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಎಲ್ಲೆಡೆ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಪಕ್ಷ, ಜಾತಿ, ಧರ್ಮದ ಅಡೆ ತಡೆಗಳಿಲ್ಲದೆ ಜನತೆ ಬೀದಿಗಿಳಿಯುತ್ತಿದ್ದು, ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ತಿದ್ದುಪಡಿ ಕಾಯ್ದೆಗೆ ಕಾಂಗ್ರೆಸ್ ಕೂಡ ವಿರೋಧ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.