ಮಂಗಳೂರು, ಜ 22 (Daijiworld News/MB) : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಟಿವಿಯಲ್ಲಿ ಕಂಡುಬಂದಿದ್ದ ಶಂಕಿತ ವ್ಯಕ್ತಿಯ ಸುಳಿವು ದೊರೆತಿದ್ದು ಆತ ಉಡುಪಿಯ ಮಣಿಪಾಲ ನಿವಾಸಿ ಆದಿತ್ಯ ರಾವ್ (40) ಎಂದು ತಿಳಿದು ಬಂದಿದ್ದು ಆತನ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಪೊಲೀಸರು ಈ ಕುರಿತು ಅಧಿಕೃತ ಪ್ರಕಟನೆ ನೀಡಿಲ್ಲ.
2018ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೆಜಿಸ್ಟಿಕ್ನಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸ್ಫೋಟ ಮಾಡುವುದಾಗಿ ಶಂಕಿತ ಆದಿತ್ಯ ರಾವ್ ಹುಸಿ ಬೆದರಿಕೆ ಕರೆ ಮಾಡಿ, ಬಂಧನವಾಗಿದ್ದ. ಒಟ್ಟು ಮೂರು ಹುಸಿ ಬೆದರಿಕೆ ಕರೆ ಮಾಡಿದ ಹಿನ್ನಲೆಯಲ್ಲಿ ಆತನನ್ನು 2018ರಲ್ಲಿ ಬಂಧನ ಮಾಡಲಾಗಿದ್ದು ಜೈಲು ಶಿಕ್ಷೆ ಅನುಭವಿಸಿದ್ದ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಒಂದರಲ್ಲಿ ಸ್ಫೋಟಕ ಇಟ್ಟಿದ್ದ ಶಂಕಿತನ ಮುಖ ಚಹರೆ ಹಾಗೂ ಆದಿತ್ಯ ರಾವ್ನ ಮುಖ ಚಹರೆ ಹೋಲಿಕೆಯಾಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಹಾಗೆಯೇ ಬೆಂಗಳೂರಿನಲ್ಲಿ ಆದಿತ್ಯರಾವ್ ಮಾಡಿದ್ದ ಬೆದರಿಕೆ ಕರೆ ಹಾಗೂ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಡಿದ್ದ ಬೆದರಿಕೆ ಕರೆಯ ಧ್ವನಿ ಹೋಲಿಕೆಯಾಗುತ್ತಿದೆ ಎಂದು ಎನ್ನಲಾಗಿದೆ.
ಈತ ಇಂಜಿನಿಯರಿಂಗ್ ಹಾಗೂ ಎಂಬಿಎ ಸ್ನಾತಕೋತ್ತರ ಪದವೀಧರನಾಗಿದ್ದು ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯ ಹುದ್ದೆಗೆ ತನ್ನನ್ನು ನೇಮಕ ಮಾಡಿಕೊಳ್ಳಲಿಲ್ಲ ಎಂದು ಕೋಪದಿಂದ ಈ ರೀತಿ ಮಾಡಿದ್ದ ಎಂದು ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಆಟೊರಿಕ್ಷಾ ಚಾಲಕ ಸಹಿತ ಹಲವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಹಾಗೆಯೇ ಶಂಕಿತ ವ್ಯಕ್ತಿ ಆದಿತ್ಯ ರಾವ್ ಪತ್ತೆಗಾಗಿ ಮಣಿಪಾಲಕ್ಕೆ ತೆರಳಿ ಶೋಧ ಕಾರ್ಯಾಚರಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.