ಸುಬ್ರಹ್ಮಣ್ಯ, ಜ 22 (Daijiworld News/MSP):ಕುಕ್ಕೇ ಸುಬ್ರಹ್ಮಣ್ಯ ಕುಮಾರಧಾರ ಸೇತುವೆಯ ಬಳಿ ಸುಮಾರು ಮೂರು ತಿಂಗಳುಗಳಿಂದ ಜಾಕೆಟ್ ಹಾಕಿಕೊಂಡು ಮೈಮೇಲೆ ಸಿಕ್ಕ ಸಿಕ್ಕ ಬಟ್ಟೆಗಳನ್ನು ಹೊದ್ದುಕೊಂಡು, ಹರಿದ ಬಟ್ಟೆಗಳನ್ನು ಧರಿಸಿ ಅಲೆದಾಡುತ್ತಿದ್ದ, ಮಾನಸಿಕ ಅಸ್ವಸ್ಥ ಯುವಕನನ್ನು ಸ್ಥಳಿಯರು ರಕ್ಷಣೆ ಮಾಡಿ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಸ್ಥಳೀಯ ಹೋಟೆಲ್ ನವರು ಕೊಡುವ ಆಹಾರಗಳನ್ನು ತಿನ್ನುತ್ತಿದ್ದ.ಕುಕ್ಕೇ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರಲ್ಲಿ ಗಲಾಟೆ ಮಾಡಿ ದುಡ್ಡು ಕೊಡಿ ಎಂದು ಕೇಳುತ್ತಿದ್ದ. ಈತನ ವರ್ತನೆ ನೋಡಿ ದೇವಸ್ಥಾನಕ್ಕೆ ಬರುವ ಪ್ರವಾಸಿಗರು ಭಯಪಡುತಿದ್ದರು, ಹಲವಾರು ಪ್ರವಾಸಿಗರು ಈ ಮಾನಸಿಕ ರೋಗಿಗೆ ಹೊಡೆದ ಸನ್ನಿವೇಶಗಳೂ ನಡೆದಿತ್ತು.
ರಾತ್ರಿ ಹಗಲು ಎನ್ನದೆ ಬಿಸಿಲಿನಲ್ಲಿ ಅಲೆದಾಡಿಕೊಂಡು, ಸೇತುವೆಯ ಮೇಲೆ ಮಲಗುತ್ತಿದ್ದ, ಈ ವಿಚಾರವನ್ನು ಗಮನಿಸಿದ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ, ಪೊಲೀಸ್ ಸಿಬ್ಬಂದಿ ಸಂಧ್ಯಾ ಮಣಿ, ಸುಬ್ರಹ್ಮಣ್ಯದ ಹಲವು ಮಾಧ್ಯಮ ವರದಿಗಾರರು ಸೇರಿ ಈತನನ್ನು ಮಂಜೇಶ್ವರದ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ ಚೇತನ ಕೇಂದ್ರಕ್ಕೆ ದಾಖಲಿಸುವ ಮೂಲಕ ರಕ್ಷಣೆ ಮಾಡಿದ್ದಾರೆ.
ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ ಚೇತನ ಕೇಂದ್ರದ ಮುಖ್ಯಸ್ಥ ಜೋಸೆಫ್, ಸಿಬ್ಬಂದಿಗಳಾದ ಜೋವಿಯಲ್,ಸಂದೀಪ್,ಆಲ್ವಿನ್ ಮುತುವರ್ಜಿಯಲ್ಲಿ ಮಾನಸಿಕ ಅಸ್ವಸ್ಥ ಯುವಕನ ಆರೈಕೆ ಮಾಡಲಾಗುತ್ತಿದ್ದು, ಯುವಕ ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ಮನೆಯವರನ್ನು ಸಂಪರ್ಕಿಸಲಾಗುವುದು ಎಂದು ಸ್ನೇಹಾಲಯದ ಅಧಿಕಾರಿಗಳು ತಿಳಿಸಿದ್ದಾರೆ.