ನವದೆಹಲಿ, ಜ 31: ಕೇಂದ್ರ ಸರಕಾರ 2018-19ನೇ ಸಾಲಿನ ಬಜೆಟ್ ನ್ನು ನಾಳೆ ಅಂದರೆ ಫೆ.1 ಗುರುವಾರ ಮಂಡಿಸಲಿದ್ದು, ಜನಸಾಮಾನ್ಯರಿಂದು ಹಿಡಿದು, ನಾನಾ ವಲಯಗಳ ನಿರೀಕ್ಷೆಗಳು ಗರಿಕೆದರಿದೆ. ಜಿಎಸ್ಟಿ ಜಾರಿ ಮತ್ತು ನೋಟು ಅಮಾನ್ಯೀಕರಣದಿಂದ ಉಂಟಾದ ವ್ಯತ್ಯಯಗಳು ಹಾಗೂ ಪ್ರಧಾನಿ ಮೋದಿ ಸರ್ಕಾರದ ಹೊಸ ಹೊಸ ಆರ್ಥಿಕ ಆವಿಷ್ಕಾರದ ಫಲಿತಾಂಶ ಈ ಬಾರಿ ಮಂಡನೆಯಾಗುವ ಬಜೆಟ್ ನಲ್ಲಿ ತಿಳಿಯಲಿದೆ. ಕೃಷಿ ವಲಯ , ಉದ್ಯಮ ವಲಯದ ಹೂಡಿಕೆಗೂ ಉತ್ತೇಜನ ಸಿಗಬಹುದೆಂದು ನಿರೀಕ್ಷೆ ಇದೆ. ಚುನಾವಣೆ ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಗ್ರಾಮೀಣಾಭಿವೃದ್ಧಿ, ನಿರುದ್ಯೋಗಿಗಳಿಗೆ ಬಂಪರ್ ಕೊಡುಗೆ ನೀಡಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ. ರಾಷ್ಟ್ರತಿಗಳೂ ಅಧಿವೇಶನಕ್ಕೆ ಮೊದಲು ನಡೆಸಿದ ಭಾಷಣದಲ್ಲಿ ಇದು ರೈತರ ಶ್ರೇಯೋಭಿವೃದ್ಧಿಗೆ ಮೀಸಲಾಗುವ ಬಜೆಟ್ ಆಗಲಿದೆ ಎಂದಿದ್ದಾರೆ. ಆ ಮೂಲಕ ಇದುವರೆಗೆ ಮೋದಿ ಸರ್ಕಾರ ಅಷ್ಟೊಂದು ಗಮನ ಕೊಡದ ಕೃಷಿ ಕ್ಷೇತ್ರದ ಬಗ್ಗೆ ಹೆಚ್ಚಿನ ಒಲವು ತೋರಬಹುದು. ಆ ಮೂಲಕ ಆ ವರ್ಗದ ಜನರ ಸೆಳೆಯುವ ಪ್ರಯತ್ನ ನಡೆಸಬಹುದು ಎಂದು ಅಂದಾಜಿಸಲಾಗಿದೆ.