ಮಂಗಳೂರು, ಜ 22 (Daijiworld News/MB) : ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಆದಿತ್ಯರಾವ್ ಮಂಗಳೂರು ಕುಡ್ಲ ಕ್ವಾಲಿಟಿ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದು ಚಿಲಿಂಬಿಯಲ್ಲಿ ವಾಸವಾಗಿದ್ದ ಎಂದು ತಿಳಿದು ಬಂದಿದೆ.
ಕಳೆದ ಎರಡು ತಿಂಗಳಿನಿಂದ ಕ್ವಾಲಿಟಿ ಹೊಟೇಲ್ನ ಬಾರ್ ಅಂಡ್ ರೆಸ್ಟೋರೆಂಟ್ ವಿಭಾಗದಲ್ಲಿ ಬಿಲ್ಲಿಂಗ್ನ ಕೆಲಸ ಮಾಡುತ್ತಿದ್ದ ಆರೋಪಿ ಆದಿತ್ಯರಾವ್ ಯಾರೊಂದಿಗೂ ಮಾತನಾಡದೇ ಒಂಟಿಯಾಗಿ ಇರುತ್ತಿದ್ದ ಎಂದು ಮಾಹಿತಿ ಲಭಿಸಿದೆ.
ಅಷ್ಟು ಮಾತ್ರವಲ್ಲದೇ ಆತ ಕೆಲಸಕ್ಕೆ ಬರುವಾಗ ಬ್ಯಾಗ್ ಒಂದನ್ನು ತಂದು ತಾನು ಬಿಲ್ಲಿಂಗ್ ಮಾಡುವ ಸಂದರ್ಭದಲ್ಲಿ ತನ್ನ ಕಾಲಿನ ಬಳಿಯೇ ಇರಿಸಿಕೊಳ್ಳುತ್ತಿದ್ದ. ಆತ ಸಸ್ಯಾಹಾರಿಯಾದ ಕಾರಣದಿಂದಾಗಿ ಕೆಳಗಿನ ವೆಜ್ ಹೊಟೇಲ್ಗೆ ಹೋಗಿ ಊಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಮಂಗಳವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮಂಗಳೂರು ಮೈಸೂರು, ಶಿವಮೊಗ್ಗ, ಹಾಸನ, ಉಡುಪಿ ಸೇರಿದಂತೆ ಹಲವು ಕಡೆಗಳಲ್ಲಿ ಆರೋಪಿಯ ಶೋಧ ಕಾರ್ಯಚರಣೆ ಮಾಡುತ್ತಿರುವ ಹಿನ್ನಲೆಯಲ್ಲಿ ಆತನೇ ಪೊಲೀಸರಿಗೆ ಬೆಂಗಳೂರಿನಲ್ಲಿ ಶರಣಾಗಿದ್ದಾನೆ ಎಂದು ಹೇಳಲಾಗಿದೆ. ಹಾಗೆಯೇ ಆದಿತ್ಯರಾವ್ ರಾತ್ರೋರಾತ್ರಿ ಬೆಂಗಳೂರಿಗೆ ಲಾರಿ ಮೂಲಕ ತೆರಳಿದ್ದ ಎಂದು ತಿಳಿದುಬಂದಿದೆ.
ಆತ ಉಡುಪಿ ಮೂಲದವನಾಗಿದ್ದು 2018ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೆಜಿಸ್ಟಿಕ್ನಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸ್ಪೋಟ ನಡೆಸುವುದಾಗಿ ಹುಸಿ ಬೆದರಿಕೆ ಕರೆ ಮಾಡಿ, ಬಂಧನಕ್ಕೆ ಒಳಗಾಗಿದ್ದ ಹಿನ್ನಲೆಯಲ್ಲಿ ಆತನ ಪೋಷಕರು ಮಂಗಳೂರಿನಲ್ಲಿ ನೆಲೆಸಿದ್ದರು.
ಆದಿತ್ಯ ರಾವ್ ತಂದೆ ಕೃಷ್ಣಮೂರ್ತಿ ಮಂಗಳೂರಿನ ಚಿಲಿಂಬಿ ಎಂಬಲ್ಲಿ ವಾಸವಾಗಿದ್ದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಒಪ್ಪಿಲ್ಲ. ಆದಿತ್ಯರಾವ್ ಕಿರಿಯ ಸಹೋದರ ಕೆನರಾ ಬ್ಯಾಂಕ್ ನಲ್ಲಿ ಉದ್ಯೋಗಿಯಾಗಿರುವ ಹಿನ್ನಲೆಯಲ್ಲಿ ಬ್ಯಾಂಕ್ ವತಿಯಿಂದ ಅಪಾರ್ಟ್ ಮೆಂಟ್ ನೀಡಲಾಗಿದೆ.