ಮಂಗಳೂರು, ಜ 22 (Daijiworld News/MB) : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಆದಿತ್ಯ ರಾವ್ ಪೋಲಿಸರಿಗೆ ಶರಣಾಗಿದ್ದು, ಆತನ ಸಹೋದರ ಪೊಲೀಸರಿಗೆ ತನಿಖೆ ನಡೆಸಲು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಆರೋಪಿ ಆದಿತ್ಯ ರಾವ್ನ ಸಹೋದರ, "ಕಳೆದ ಮೂರು ವರ್ಷಗಳಿಂದ ನಮಗೆ ಆತನ ಯಾವುದೇ ಸಂಪರ್ಕವಿಲ್ಲ. ಕಳೆದ ವರ್ಷ ಆತ ಜೈಲಿಗೆ ಹೋದ ಸಂದರ್ಭದಲ್ಲೂ ನಾವು ಆತನ ಸಂಪರ್ಕ ಮಾಡಿರಲಿಲ್ಲ. ಕಳೆದ ವರ್ಷ ತಾಯಿ ತೀರಿಕೊಂಡಿದ್ದು ಆ ವಿಚಾರವನ್ನು ನಾವು ಜೈಲಿಗೆ ಕರೆ ಮಾಡಿ ತಿಳಿಸಿದ್ದೇವೆ. ಆದರೆ ಆತ ಬಂದಿಲ್ಲ" ಎಂದು ಹೇಳಿದ್ದಾರೆ.
ಹಾಗೆಯೇ ಆತ ಮಂಗಳೂರಿನಲ್ಲಿ ಇರುವ ಕುರಿತು ನಮಗೆ ಯಾವುದೇ ಮಾಹಿತಿಮ ಇರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ನಾವು ಪೊಲೀಸರಿಗೆ ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ.
ಆರೋಪಿ ಆದಿತ್ಯ ರಾವ್ ಅವರ ತಂದೆ ಹಾಗೂ ಸಹೋದರ ಮಂಗಳೂರಿನ ಚಿಲಿಂಬಿಯ ಫ್ಲ್ಯಾಟ್ ಒಂದರಲ್ಲಿ ವಾಸವಾಗಿದ್ದಾರೆ.
ಎಸಿಪಿ ಬೆಳ್ಳಿಯಪ್ಪ, ವಿನಯ್ ಗಾಂವ್ಕರ್ ನೇತೃತ್ವದ ಐದು ಅಧಿಕಾರಿಗಳ ತನಿಖಾ ತಂಡ ವಿಮಾನದ ಮೂಲಕ ಬೆಂಗಳೂರಿಗೆ ತಲುಪಿದೆ. ಮಂಗಳೂರು ಪೊಲೀಸರಿಗೆ ಸಂಬಂಧಿಸಿದ ಪ್ರಕರಣವಾಗಿರುವ ಕಾರಣ ಬೆಂಗಳೂರು ಪೊಲೀಸರು ಆರೋಪಿಯನ್ನು ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.