ಮಂಗಳೂರು, ಜ.22 (Daijiworld News/PY) : "ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣದಲ್ಲಿ ಗುಪ್ತಚರ ಇಲಾಖೆಯ ವೈಫಲ್ಯತೆ ಕಂಡುಬರುತ್ತದೆ" ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಆರೋಪಿಯು ಬೆಂಗಳೂರು ತಲುಪುವ ತನಕ ಪೊಲೀಸರು ಎಲ್ಲಿದ್ದರು, ಎಲ್ಲಾ ಸ್ಕ್ವಾಡ್ಗಳು ಎಲ್ಲಿ ಹೋಗಿದ್ದರು. ಎಲ್ಲಾ ಮಾಹಿತಿಗಳು ಪೊಲೀಸರ ಬಳಿ ಇತ್ತು. ಆದರೂ ಆರೋಪಿ ಆರಾಮವಾಗಿ ಬೆಂಗಳೂರಿಗೆ ಹೋಗಿ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ. ಇದರಿಂದ ಗುಪ್ತಚರ ಇಲಾಖೆಯ ವೈಫಲ್ಯತೆ ಕಂಡುಬರುತ್ತದೆ. ಆದ ಕಾರಣ ಇದರ ಬಗ್ಗೆ ತನಿಖೆಯಾಗಬೇಕು" ಎಂದು ಹೇಳಿದರು.
"ಆರೋಪಿಗೆ ತಲೆ ಸರಿ ಇಲ್ಲಾ ಅಂತ ಹೇಳ್ತಾರೆ. ಆದರೆ ಆರೋಪಿ ಹೇಗೆ ಬಾಂಬ್ ಫಿಕ್ಸ್ ಮಾಡಿದ. ಅಲ್ಲದೇ ಒಬ್ಬನೇ ಹೋಗಿ ಬಾಂಬ್ ಫಿಕ್ಸ್ ಮಾಡಲು ಸಾಧ್ಯವಿಲ್ಲ. ಬೇರೆಯವರ ಸಹಾಯದಿಂದ ಈ ಕೆಲಸವನ್ನು ಮಾಡಿದ್ದಾನೆ. ಮಂಗಳೂರು ಬಾಂಬರ್ ಬಂಧನ ವಿಚಾರವು ಅತ್ಯಂತ ಗಂಭೀರವಾದ ವಿಚಾರವಾಗಿದೆ. ಸಮಾಜದ್ರೋಹಿ ಶಕ್ತಿಗಳು ಎಲ್ಲಾ ವರ್ಗದಲ್ಲಿ ಇದ್ದಾರೆಒಂದೇ ವರ್ಗವನ್ನು ಗುರಿಯಾಗಿಸಬಾರದು. ಆರೋಪಿಯನ್ನು ಪತ್ತೆ ಹಚ್ಚುವ ಮೊದಲೇ ಸಮುದಾಯವನ್ನು ಗುರಿಯಾಗಿಸಿದ್ದಾರೆ" ಎಂದರು.
"ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟು ಡಿಜಿ ಹಾಗೂ ಐಜಿಪಿ ಕಚೇರಿಗೆ ಹೋಗಿದ್ದಾನೆ. ಹೀಗಾಗಿ ಈ ಪ್ರಕರಣದ ಹಿಂದೆ ಮಹಾನ್ ಸಂಚು ಇದೆ. ತಾನಾಗಿಯೇ ಹೋಗಿ ಅಲ್ಲಿ ಶರಣಾದ ಇಲ್ಲ ಅಂದ್ರೆ ಪ್ರಕರಣದಲ್ಲಿ ಯಾರ್ ಯಾರ ಹೆಸರು ಬರುತ್ತಿತ್ತು. ಇದು ನನಗೆ ಪ್ರಹಸನ ಅನ್ನಿಸುವುದಿಲ್ಲ. ಈ ವಿಚಾರವಾಗಿ ಗೃಹಸಚಿವರು ಕ್ಷಮೆಯಾಚಿಸಬೇಕು" ಎಂದು ಹೇಳಿದರು.