ಮಂಗಳೂರು, ಜ.22 (Daijiworld News/PY) : ತಣ್ಣೀರುಬಾವಿ ಕ್ರಾಸ್ ಸಮೀಪವಿರುವ ಕುದುರೆಮುಖ ಕಂಪೆನಿ ಬಸ್ ಸ್ಟಾಂಡ್ನಲ್ಲಿ ಅಕ್ರಮವಾಗಿ ಕೃಷ್ಣ ಮೃಗ ಜಾತಿಯ ಕಾಡು ಪ್ರಾಣಿಯ ಚರ್ಮದ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಇಬ್ಬರನ್ನು ಜ.21 ಮಂಗಳವಾರದಂದು ಪಣಂಬೂರು ವಿಶೇಷ ಪೊಲೀಸ್ ದಳ ಹಾಗೂ ಮಂಗಳೂರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಬಂಧಿಸಿದ್ದಾರೆ.
ಆರೋಪಿಗಳನ್ನು ಗದಗ ಜಿಲ್ಲೆಯ ಕೋಟುಮಚ್ಚಿಗೆ ಗ್ರಾಮದ ನಿವಾಸಿ ಪ್ರದೀಪ್ ಬಿನ್ ಮಲ್ಲಿಕಾರ್ಜುನ್(20) ಹಾಗೂ ಗದಗ ಜಿಲ್ಲೆಯ ಹಿರೆಕೊಪ್ಪ ಗ್ರಾಮದ ಅನಿಲ್ ನರಸಾಪುರ್ ಬಿನ್ ಶಿವಪ್ಪ(20) ಎಂದು ಗುರುತಿಸಲಾಗಿದೆ.
ಇಬ್ಬರು ಆರೋಪಿಗಳು ತಣ್ಣೀರುಬಾವಿ ಕ್ರಾಸ್ ಸಮೀಪವಿರುವ ಕುದುರೆಮುಖ ಕಂಪೆನಿ ಬಸ್ ಸ್ಟಾಂಡ್ನಲ್ಲಿ ಅಕ್ರಮವಾಗಿ ಕೃಷ್ಣ ಮೃಗ ಜಾತಿಯ ಕಾಡು ಪ್ರಾಣಿಯ ಚರ್ಮದ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳಿಂದ ಕೃಷ್ಣ ಮೃಗ ಪ್ರಾಣಿಯ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.
ಮುಂದಿನ ಕ್ರಮಕ್ಕಾಗಿ ಇಬ್ಬರು ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತುಗಳನ್ನು ಘನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ 14 ದಿವಸಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ವಶಪಡಿಸಿಕೊಂಡ ಸೊತ್ತುಗಳನ್ನು ಇಲಾಖೆಯ ವಶದಲ್ಲಿಟ್ಟುಕೊಳ್ಳಲು ಅನುಮತಿ ನೀಡಿದೆ.
ಪ್ರಕರಣದ ಮುಂದಿನ ತನಿಖೆಯನ್ನು ಡಾ. ಕರಿಕಲನ್ ಭಾಅಸೇ, ಉಪ ಅರಣ್ಯಸಂರಕ್ಷಣಾಧಿಕಾರಿ, ಮಂಗಳೂರು ವಿಭಾಗ, ಶಂಕರೇ ಗೌಡ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕರು ಮಂಗಳೂರು ಇವರ ನಿರ್ದೇಶನದಂತೆ ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಅವರು ತನಿಖೆ ನಡೆಸುತ್ತಿದ್ದಾರೆ.