ಬೈಂದೂರು, ಜ.22 (Daijiworld News/PY) : "ಸಾಂಪ್ರದಾಯಿಕ ಶಕ್ತಿಮೂಲಗಳು ಕ್ಷಯಿಸುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಪರ್ಯಾಯ ಮೂಲಗಳ ಅವಲಂಬನೆ ಅನಿವಾರ್ಯವೆನಿಸಿದೆ. ಧಾರಾಳವಾಗಿ, ಉಚಿತವಾಗಿ ಲಭ್ಯವಿರುವ ಹಾಗೂ ಪರಿಸರ ಸ್ನೇಹಿಯಾಗಿರುವ ಸೌರಶಕ್ತಿಯನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲು ಸಾಧ್ಯವಿರುವುದರಿಂದ ಜನರು ಅದರತ್ತ ಹೊರಳಬೇಕು" ಎಂದು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಅಧ್ಯಕ್ಷ ಪಿ. ಗೋಪಿಕೃಷ್ಣ ಹೇಳಿದರು.
ಗೋಳಿಹೊಳೆಯ ಮಹಿಷಾಸುರ ಮರ್ಧಿನಿ ಸಭಾಭವನದಲ್ಲಿ ಬುಧವಾರ ಬ್ಯಾಂಕ್ ಮತ್ತು ಸೆಲ್ಕೋ ಸೋಲಾರ್ ಲೈಟ್ ಜಂಟಿ ಆಶ್ರಯದಲ್ಲಿ ನಡೆದ ವಿಕಾಸ ಸೌರ ಸ್ವಾವಲಂಬನೆಯ ಮೊದಲ ಸಾಧನೆಯನ್ನು ಉದ್ಘಾಟಿಸಿ ಮಾತನಾಡಿದರು.
"ನಮ್ಮೆಲ್ಲ ದಿನಬಳಕೆಯ ಉಪಕರಣಗಳಿಗೆ ಈಗ ವಿದ್ಯುತ್ ಅನಿವಾರ್ಯ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸುಲಭ ಲಭ್ಯವಲ್ಲ. ಆದುದರಿಂದ ಸೆಲ್ಕೋ ಸೋಲಾರ್ ಲೈಟ್ಸ್ ಸಂಸ್ಥೆ ಬೆಳಕಿಗೆ ಮಾತ್ರವಲ್ಲದೆ ಸ್ವದ್ಯೋಗ ನಡೆಸಲು ಅಗತ್ಯವಿರುವ 60 ಯಂತ್ರಗಳಿಗೆ ಸೌರಶಕ್ತಿ ಅಳವಡಿಸುತ್ತಿದೆ. ಅವುಗಳನ್ನು ಅಳವಡಿಸಿಕೊಳ್ಳಲು ಗ್ರಾಮೀಣ ಬ್ಯಾಂಕ್ ಸಹಾಯಧನ ಸಹಿತವಾದ ಸಾಲ ನೀಡುತ್ತದೆ. ಜನರು ಈ ಸೌಲಭ್ಯದ ಗರಿಷ್ಠ ಲಾಭ ಪಡೆಯಬೇಕು. ಸ್ಥಳೀಯರ ಕೋರಿಕೆಯನ್ನು ಮನ್ನಿಸಿ ಗೋಳಿಹೊಳೆಯಲ್ಲಿ ಎಟಿಎಂ ಸೌಲಭ್ಯ ಆರಂಭಿಸಲಾಗುವುದು" ಎಂದು ಹೇಳಿದರು.