ಉಳ್ಳಾಲ, ಜ 22 (DaijiworldNews/SM): ಪೌರತ್ವ ತಿದ್ದುಪಡಿ ಪರ ಜ.27 ರಂದು ಕೂಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಲಿರುವ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಹಾಗೂ ಮಂಗಳೂರು ಕ್ಷೇತ್ರದಿಂದಲೇ 10 ರಿಂದ 12 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಹೇಳಿದರು.
ಪೌರತ್ವ ತಿದ್ದುಪಡಿಗೆ ವಿರೋಧಿಸುವ ವರ್ಗ ಸೃಷ್ಟಿಯಾಗಿದೆ. ಕಾಂಗ್ರೆಸ್ ಮತ್ತು ಜನತಾ ದಳದ ಪ್ರೇರಣೆಯಿಂದಲೇ ಪೌರತ್ವ ತಿದ್ದುಪಡಿ ವಿರೋಧಿ ವರ್ಗ ಸೃಷ್ಟಿಯಾಗಿದೆ. ಆದರೆ ಜ.27ರಂದು ನಡೆಯಲಿರುವ ದೇಶದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರಮುಖ ಭಾಷಣ ಮಾಡಲಿರುವ ಸಭೆಯಲ್ಲಿ ಪೌರತ್ವ ತಿದ್ದುಪಡಿಯ ಸ್ಪಷ್ಟತೆಯನ್ನು ಜನತೆ ಮುಂದೆ ಇಡಲಿದ್ದಾರೆ.
ಸಭೆಯಲ್ಲಿ ಉಡುಪಿ ಹಾಗೂ ದ.ಕ. ಜಿಲ್ಲೆಗಳಿಂದ ಜನ ಭಾಗವಹಿಸಲಿದ್ದಾರೆ. ಅಂದು ಅಂಗಡಿ ಮುಗ್ಗಟ್ಟುಗಳನ್ನು ಬಂದ್ ನಡೆಸಿ, ಸಂಚಾರಿ ವ್ಯವಸ್ಥೆ, ಕಂಪೆನಿ, ಫ್ಯಾಕ್ಟರಿಗಳನ್ನು ಮಾಲೀಕರು ಸ್ವಪ್ರೇರಿತ ಬಂದ್ ನಡೆಸಿ ಕಾರ್ಮಿಕರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕಿದೆ.
ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೊಳಿಸುವ ಮೂಲಕ ಜಗತ್ತಿನಾದ್ಯಂತ ಪ್ರಧಾನಿ ಮೋದಿ ಕುರಿತು ಪ್ರಶಂಸನೀಯ ಮಾತುಗಳು ಕೇಳುತ್ತಿವೆ. 1.4 ಲಕ್ಷಕ್ಕೂ ಮಿಕ್ಕಿ ಜನ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಅಂದಿನ ಕಾಂಗ್ರೆಸ್ ಬೆಂಬಲಿತ ಪ್ರಧಾನಿ ಇಂದಿರಾಗಾಂಧಿಯವರೇ ಪೌರತ್ವ ಕಾಯಿದೆ ಜಾರಿಗೊಳಿಸಲು ಹೇಳಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾರ್ಲಿಮೆಂಟಿನಲ್ಲಿ ಪೌರತ್ವ ಕಾಯಿದೆ ಜಾರಿಗೊಳಿಸಲು ಅಂದು ಗಲಾಟೆ ಮಾಡಿದವರು. ಇದೀಗ ಬಿಜೆಪಿ ಸರಕಾರ ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯಕ್ಕಾಗಿ ಜನರನ್ನು ಗೊಂದಲಕ್ಕೀಡು ಮಾಡುವ ಕೆಲಸಗಳಾಗುತ್ತಿದೆ. ಲೋಕಸಭೆ ಚುನಾವಣೆ ಸಂದರ್ಭ ಬಿಜೆಪಿ ಪ್ರಣಾಳಿಕೆಯಲ್ಲೇ ಪೌರತ್ವ ತಿದ್ದುಪಡಿ ಹೇಳಿಕೆ ಬಿಡುಗಡೆಗೊಳಿಸಲಾಗಿತ್ತು. ಇದನ್ನು ಓದಿಯೇ 300 ಸೀಟುಗಳನ್ನು ಬಿಜೆಪಿ ಬಹುಮತದಿಂದ ಮತಗಳನ್ನು ಪಡೆದುಕೊಂಡಿದೆ. ಈ ಮೂಲಕ ಕೇಂದ್ರ ಸರಕಾರ ತೆಗೆದುಕೊಂಡ ಒಳ್ಳೆಯ ನಿರ್ಣಯ, ಎಲ್ಲರಿಗೂ ನ್ಯಾಯ ಕೊಡಿಸುವ ಉದ್ದೇಶದಿಂದ ಜಾರಿ ಮಾಡಲಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಕು.ಸ್ವಾಮಿಯನ್ನು ನಿಮ್ಹಾನ್ಸ್ ಗೆ ದಾಖಲಿಸಿ !
ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಇಲಾಖೆಗೆ ಅಭಿನಂದನೆ, ತಕ್ಷಣವಾಗಿ ಬೇಧಿಸುವ ಮೂಲಕ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಬಾಂಬ್ ಸ್ಫೋಟವಾಗುತ್ತಿದ್ದಲ್ಲಿ ಎಲ್ಲಾ ವರ್ಗದ ಜನ, ಧರ್ಮೀಯರಿಗೆ ತೊಂದರೆಯಾಗುತ್ತಿತ್ತು. ಆದರೆ ಪೊಲೀಸರ ಮೇಲೆ ಸಂಶಯ ವ್ಯಕ್ತಪಡಿಸಿ, ಇಲಾಖೆಗೆ ಅಗೌರವ ತೋರಿಸುವ ಮಾಜಿ ಮುಖ್ಯಮಂತ್ರಿ ಜನರ ಪ್ರತಿನಿಧಿಯಾಗಲು ಅನರ್ಹರು. ಭಾರತದ ಸೈನಿಕರನ್ನು ಅಪಹಾಸ್ಯ ಮಾಡಿದವರು, ಇದೀಗ ಪೊಲೀಸರನ್ನು ದೂರುತ್ತಿರುವ ಕುಮಾರಸ್ವಾಮಿಯವರು ದೇಶದ್ರೋಹಿ ಮನೋಭಾವದವರು. ಕುಮಾರಸ್ವಾಮಿಗೆ ರಿವಸ್ 9 ಹೊಡೆದ ಹಾಗೆ ಕಾಣುತ್ತದೆ. ಬಾಂಬ್ ಇಟ್ಟವನು ಯಾವುದೇ ವರ್ಗದವನು ಎಂದು ಬಿಜೆಪಿ ಹೇಳಿಲ್ಲ, ಪ್ರಕರಣದ ಮುನ್ಸೂಚನೆ ಕುಮಾರಸ್ವಾಮಿಗೆ ಇರುವ ಸಂಶಯವಿದೆ. ಕುಮಾರಸ್ವಾಮಿಯವರನ್ನು ಕೂಡಲೇ ನಿಮ್ಹಾನ್ಸ್ ಗೆ ದಾಖಲು ಮಾಡಿ ಮಂಪರು ಪರೀಕ್ಷೆ ಮಾಡಬೇಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.