ಕಾರ್ಕಳ, ಜ 22 (DaijiworldNews/SM): ಧಾರ್ಮಿಕ ಹಿಂಸೆಗೆ ಒಳಗಾಗಿ ಬಂದಂತಹ ನಿರಾಶ್ರಿತರಿಗೆ ಆಶ್ರಯವನ್ನು ಕಲ್ಪಿಸುವಂತಹ ಒಂದು ಐತಿಹಾಸಿಕ ಪೌರತ್ವ ಕಾಯ್ದೆ ತೀರ್ಪು ಇದಾಗಿದೆ. ಅದಕ್ಕೆ ಅನಗತ್ಯವಾದಂತಹ ತಪ್ಪು ಅಭಿಪ್ರಾಯಗಳನ್ನು ಒಂದು ಸಮುದಾಯದ ನಡುವೆ ಮೂಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಹಾಗೂ ಸಮಾನ ಹಿತಾಸಕ್ತಿಗಳು ಮಾಡುತ್ತಾ ಬಂದಿದೆ. ಆ ಮೂಲಕ ಸಮಾಜದಲ್ಲಿ ಗೊಂದಲವನ್ನು ಸೃಷ್ಠಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಹೇಳಿದರು.
ವಿಕಾಸ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐತಿಹಾಸಿಕ ಪೌರತ್ವ ಕಾಯ್ದೆಯ ಕುರಿತು ಜನಜಾಗೃತಿ ಹಾಗೂ ಸಭೆಗಳನ್ನು ಅಲ್ಲಲ್ಲಿ ಆಯೋಜಿಸಲಾಗುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಕಾಯ್ದೆಯನ್ನು ಬೆಂಬಲಿಸಿ ಜನವರಿ ೨೭ರಂದು ಮಂಗಳೂರಿನಲ್ಲಿ ಸಮರ್ಥನ ಸಮಾವೇಶ ನಡೆಯಲಿದ್ದು, ಕೇಂದ್ರ ರಕ್ಷಣ ಸಚಿವ ರಾಜನಾಥ ಸಿಂಗ್ ಪಾಲ್ಗೊಳ್ಳಲಿದ್ದು, ಅದಕ್ಕೆ ಪೂರ್ಣ ರೀತಿಯಲ್ಲಿ ಬೆಂಬಲವನ್ನು ಇದೇ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿ, ಸಮಾವೇಶಕ್ಕೆ ಕಾರ್ಕಳದಿಂದ ೧೦,೦೦೦ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.
ನೂತನವಾಗಿ ಜಾರಿಗೆ ತಂದಿರುವ ಕಾಯ್ದೆಯು ಪೌರತ್ವ ನೀಡುವ ಕಾಯ್ದೆಯಾಗಿದೆಯೇ ಹೊರತು ಕಸಿಯುವ ಕಾಯ್ದೆ ಅಲ್ಲ. ತಪ್ಪು ವದಂತಿಗಳಿಗೆ ಕಿವಿಕೊಡದೇ ಅದನ್ನು ಸಮರ್ಥಿಸಿ ಸಮರ್ಥನ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ನಿಲುವು ಆನ್ನು ಬೆಂಬಲಿಸಬೇಕು ಎಂದು ವಿನಂತಿಸಿದರು. ಕಾಯ್ದೆಯಲ್ಲಿ ಯಾವುದೇ ತಿದ್ದುಪಡಿ ತರದೆಯೇ ಯಥಾವತ್ತಾಗಿ ಜಾರಿಗೊಳಿಸಬೇಕು. ದೇಶದ ಹಿತದೃಷ್ಠಿ ಕಾಯ್ದೆಯನ್ನು ಅನುಷ್ಠಾನ ತರಬೇಕು ಎಂದು ಇದೇ ಸಂದರ್ಭದಲ್ಲಿ ಸರಕಾರವನ್ನು ಒತ್ತಾಯಿಸಿದರು.