ಮಂಗಳೂರು, ಜ 22 (DaijiworldNews/SM): ಮಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ದೇಶವನ್ನೇ ಬೆಚ್ಚಿಬೀಳಿಸಿದ ಆರೋಪಿ ಆದಿತ್ಯ ರಾವ್ ಕೃತ್ಯದ ಕುರಿತಂತೆ ಸಹೋದರ ಪ್ರತಿಕ್ರಿಯೆ ನೀಡಿದ್ದು, ಆದಿತ್ಯನಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಹೋದರ ಅಕ್ಷತ್, ಆದಿತ್ಯ ರಾವ್ ನನ್ನ ಅಣ್ಣ ಹೌದು. ಆದರೆ, ಇದೀಗ ನಮಗೆ ಅವನೊಂದಿಗೆ ಯಾವುದೇ ಸಂಬಂಧವಿಲ್ಲ. ಹುಸು ಬಾಂಬ್ ಬೆದರಿಕೆ ಕರೆ ಮಾಡಿದಾಗ ಬುದ್ದಿ ಹೇಳಿದ್ದೇವೆ. ಆದರೆ, ಆತ ನಮ್ಮ ಮಾತನ್ನು ಕೇಳಿಲ್ಲ. ಅವನನ್ನು ಮನೆಯಿಂದನೇ ಬಿಟ್ಟಿದ್ದೇವೆ. ನಮಗೆ ಅವನ ಸಂಪರ್ಕ ಇಲ್ಲ. ನಾವು ನಮ್ಮ ಕೆಲಸ ಮಾಡಿ ದುಡಿತಿದ್ದೇವೆ ಎಂದಿದ್ದಾರೆ.
ಇನ್ನು ಅವನ ಕೃತ್ಯಕ್ಕೆ ಜವಾಬ್ದಾರಿ ಆಗೋದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಎರಡು ವರ್ಷದಿಂದ ಅವನ ಸಂಪರ್ಕವನ್ನು ನಾವು ಬಿಟ್ಟಿದ್ದೇವೆ. ಚಿಕ್ಕಂದಿನಿಂದ ಸರಿಯಾಗೆ ಇದ್ದ. 8 ನೇ ಕ್ಲಾಸ್ ನಿಂದ ಹಾಸ್ಟೆಲ್ ಗೆ ಹೋಗಿದ್ದ. ಎಂ.ಬಿ.ಎ, ಬಿ.ಇ ವಿದ್ಯಾಭ್ಯಾಸ ಮಾಡಿದ್ದ ಎಂದಿರುವ ಸಹೋದರ, ಅವನ ಕೃತ್ಯದ ಬಗ್ಗೆ ತಿಳಿಯುವ ಆಸಕ್ತಿ ಇಲ್ಲ ಎಂದಿದ್ದಾರೆ.
ನಾವು ಅವನಿಗೆ ಯಾವುದೇ ಸಪೋರ್ಟ್ ಮಾಡಿಲ್ಲ. ಪೊಲೀಸರ ತನಿಖೆಗೆ ನಾವು ಸಂಪೂರ್ಣವಾಗಿ ಸಹಕಾರ ನೀಡಿದ್ದೇವೆ. ಬೇಲ್ ತೆಗೆದುಕೊಳ್ಳುವುದಕ್ಕೆಯೂ ಸಹಾಯ ಮಾಡಿಲ್ಲ. ಅವನ ಬಗ್ಗೆ ನಮಗೂ ಭಯ ಇದೆ. ಈ ಬಗ್ಗೆ ಪೊಲೀಸರಿಗೂ ತಿಳಿಸಲಾಗಿದೆ ಎಂದು ಸಹೋದರ ಅಕ್ಷತ್ ಪ್ರತಿಕ್ರಿಯೆ ನೀಡಿದ್ದಾರೆ.