ಕಾರ್ಕಳ, ಜ 22 (DaijiworldNews/SM): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅಶಾಂತಿ ಕದಡುವ ಪ್ರಯತ್ನ ಯಾರೇ ಮಾಡಿದರೂ ಅದು ತಪ್ಪು. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕರಾವಳಿಯಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ಯಾರು ಕೂಡಾ ಮಾಡಬಾರದು. ಅದನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂದಿದ್ದಾರೆ.
ಇನ್ನು ಪೊಲೀಸರೇ ಬಾಂಬನ್ನು ಇಟ್ಟಿದ್ದಾರೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆಯಿಂದ ಅವರೊಬ್ಬರು ಭವಿಷ್ಯಗಾರೆಂದು ಋಜುಪಡಿಸಿದೆ. ಮುಂದೆ ಯಾರ್ಯಾರು? ಏನೇನು? ಎಲ್ಲೆಲ್ಲಿ ಇಡುತ್ತಾರೆ ಎಂಬುವುದು ಅವರಿಗೆ ಚೆನ್ನಾಗಿಯೇ ಗೊತ್ತಾಗಿರುತ್ತದೆ. ಮುಂದೆ ದೇಶದಲ್ಲಿ ಏನಾಗುತ್ತದೆ ಎಂಬ ಊಹೆಯನ್ನು ತಿಳಿಯುವುದರಿಂದ ಅವರು ತಮ್ಮ ಸಲಹೆಯನ್ನು ಜಗತ್ತಿಗೂ ನೀಡಬಹುದು ಎಂದು ಇದೇ ಸಂದರ್ಭದಲ್ಲಿ ಶಾಸಕ.ವಿ.ಸುನೀಲ್ಕುಮಾರ್ ವ್ಯಂಗ್ಯವಾಡಿದರು.
ರಾಜ್ಯವನ್ನು ಮುನ್ನೆಡೆಸಿದ ಮುಖ್ಯಮಂತ್ರಿ ಈ ರೀತಿಯ ಕೀಳಭಿರುಚಿಯ ಹೇಳಿಕೆಯನ್ನು ನೀಡಬಾರದು. ಇಡೀ ಸರಕಾರಿ ವ್ಯವಸ್ಥೆಯನ್ನು ಹಾಗೂ ಅವರವರ ಆತ್ಮಸೈರ್ಯವನ್ನು ಕುಸಿಯುವ ಪ್ರಯತ್ನ ಮಾಡಬಾರದು ಎಂದರು.