ಕೋಟ, ಜ.23 (Daijiworld News/PY) : ಒಂದು ವರ್ಷದ ಹಿಂದೆ ಕೋಟದಲ್ಲಿ ನಡೆದಿದ್ದ ಭರತ್ ಶ್ರೀಯಾನ್ ಹಾಗೂ ಯತೀಶ್ ಕಾಂಚನ್ ಕೊಲೆ ಪ್ರಕರಣದ ಆರೋಪಿ ಆಗಿರುವ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ಗೆ ಈ ಹಿಂದೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.
2019ರ ಜ.26ರಂದು ಮಣೂರಿನಲ್ಲಿ 2 ಗೆಳೆಯರನ್ನು ತಲವಾರಿನಿಂದ ಕೊಚ್ಚಿ ಕೊಲೆಗೈಯಲಾಗಿತ್ತು. ಈ ಕೊಲೆಗೆ ಜಿ.ಪಂ ಕೋಟ ಕ್ಷೇತ್ರದ ಸದಸ್ಯ ರಾಘವೇಂದ್ರ ಕಾಂಚನ್ ಅವರು ಪ್ರೇರಣೆ ನೀಡಿದ್ದಾರೆ ಎನ್ನುವ ಆರೋಪದಲ್ಲಿ ರಾಘವೇಂದ್ರ ಕಾಂಚನ್ ಅವರನ್ನು ಬಂಧಿಸಲಾಗಿದ್ದು, ಆರೇಳು ತಿಂಗಳುಗಳ ಬಳಿಕ ಹೈಕೋರ್ಟ್ ರಾಘವೇಂದ್ರ ಕಾಂಚನ್ ಅವರಿಗೆ ಜಾಮೀನು ನೀಡಿತ್ತು.
ಕೊಲೆಯಾದ ಭರತ್ ಎಂಬುವವರ ತಾಯಿ ಪಾರ್ವತಿ ಅವರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಹೈಕೋರ್ಟ್ ನೀಡಿದ ಜಾಮೀನನ್ನು ರದ್ದುಗೊಳಿಸಿದೆ. ಆದರೆ ಆರೋಪಿ ರಾಘವೇಂದ್ರ ಕಾಂಚನ್ ಅವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.