ಮಂಗಳೂರು, ಜ 23 (Daijiworld News/MSP): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯರಾವ್ ಸದ್ಯ ಮಂಗಳೂರು ಪೊಲೀಸರ ವಶದಲ್ಲಿದ್ದು ಎಸಿಪಿ ಬೆಳ್ಯಪ್ಪ ತಂಡದಿಂದ ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಇದೀಗ ಆರೋಪಿ ಆದಿತ್ಯರಾವ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಬಾಂಬ್ ಇಟ್ಟ ಬಳಿಕ ಅಂದೇ ಅಂದರೆ ಜನವರಿ 20 ರಂದು ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಿದ್ದಾಗಿ ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ಇಂಡಿಗೋ ಅಧಿಕಾರಿಗಳು ಈ ದೂರು ನೀಡಿದ್ದಾರೆ.
ಜನವರಿ 20 ರ ಮಧ್ಯಾಹ್ನ 2.30 ರ ಸುಮಾರಿಗೆ ಆದಿತ್ಯರಾವ್ ಇಂಡಿಗೋ ಮ್ಯಾನೇಜರ್ ಗೆ ಕರೆ ಮಾಡಿ ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ ಕರೆ ಮಾಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿಗೋ ಅಧಿಕಾರಿಗಳು ಆದಿತ್ಯರಾವ್ ವಿರುದ್ಧ ಮಂಗಳೂರಿನ ಬಜ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.