ಮಂಗಳೂರು, ಜ 23 (Daijiworld News/MSP): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯರಾವ್ ವಾಸ್ತವದಲ್ಲಿ ಎಂಜಿನಿಯರಿಂಗ್ ಹಾಗೂ ಎಂಬಿಎ ಪದವೀಧರ.. ಆದರೂ ಈ ಎಲ್ಲಾ ವಿಚಾರವನ್ನು ತನ್ನ ಬಯೋಡಾಟಾದಲ್ಲಿ ಹೇಳಿಕೊಂಡಿರಲಿಲ್ಲ ಎಂಬ ಸತ್ಯಸಂಗತಿ ಆತ ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನೀಡಿದ ಬಯೋಡಾಟಾದಲ್ಲಿ ತಿಳಿದುಬಂದಿದೆ.
ಮಂಗಳೂರು, ಖಾಸಗಿ ಹೊಟೇಲ್ ನಲ್ಲಿ ನೀಡಿದ ಬಯೋಡಾಟಾದಲ್ಲಿ ತಾನು ಕರಾಟೆಯಲ್ಲಿ "ಯೆಲ್ಲೋ ಬೆಲ್ಟ್" ಪಡೆದುಕೊಂಡಿದ್ದೇನೆ ಹಾಗೂ ಸಂಗೀತ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿದ್ದು ಮತ್ತು ಎನ್ ಸಿಸಿ ಕೆಡೆಟ್ ಆಗಿ ಶಿಸ್ತಿನ ವ್ಯಕ್ತಿ ಎಂದು ಬರೆದುಕೊಂಡಿದ್ದಾನೆ.
ಇಂಗ್ಲಿಷ್, ಹಿಂದಿ, ಕನ್ನಡ ಮತ್ತು ತುಳು ಭಾಷೆಗಳು ಬಲ್ಲವನಾಗಿದ್ದೇನೆ. ಟ್ರಾವೆಲಿಂಗ್, ಕ್ರಿಕೆಟ್, ಮ್ಯೂಸಿಕ್, ಮತ್ತು ಚರ್ಚೆಯೂ ಆಸಕ್ತಿಯ ವಿಷಯಗಳು. ಹತ್ತನೇ ತರಗತಿಯಲ್ಲಿ 82% ಹಾಗೂ ಪಿ.ಯು.ಸಿಯಲ್ಲಿ 68% ಅಂಕಗಳನ್ನು ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾನೆ.
ಔದ್ಯೋಗಿಕವಾಗಿ ತನ್ನ ಮುಖ್ಯ ಸಾಮರ್ಥ್ಯವನ್ನು ಹೊಸ ವಾತಾವರಣಕ್ಕೆ ಶೀಘ್ರ ಹೊಂದಣಿಕೆ, ಹೊಸ ಆವಿಷ್ಕಾರಗಳ ಆಲೋಚನೆ ಹಾಗೂ ತಂಡದೊಂದಿಗೆ ಉತ್ತಮ ಕಾರ್ಯನಿರ್ವಹಣೆ ಎಂದು ತಿಳಿಸಿದ್ದ.
ವಿಶೇಷವೆಂದರೆ ಆದಿತ್ಯ ತನ್ನ ಬಯೋಡಾಟದ ಕೊನೆಯ ಸಾಲಿನಲ್ಲಿ ಉಲ್ಲೇಖಿಸಿರುವ ಒಂದು ವಾಕ್ಯ ಸಾಕಷ್ಟು ಕುತೂಹಲಕಾರಿಯಾಗಿದೆ. " ಪಾಸಿಟಿವ್ ಪ್ರೇಮ್ ಆಫ್ ಮೈಂಡ್ ಅಂಡ್ ಸೆನ್ಸ್ ಆಫ್ ಅಚೀವ್ ಮೆಂಟ್ ಲೀಡ್ಸ್ ಟು ದಿ ಬೆಸ್ಟ್ ಔಟ್ ಪುಟ್ " ಅಂದರೆ ಧನಾತ್ಮಕ ಮನಸ್ಸು ಮತ್ತು ಸಾಧನೆಯ ಪ್ರಜ್ಞೆ ಉತ್ತಮ ಫಲಿತಾಂಶದತ್ತ ಕೊಂಡೊಯ್ಯುತ್ತದೆ ಎಂದು ಹೇಳಿಕೊಂಡಿದ್ದಾನೆ.