ಸುಬ್ರಹ್ಮಣ್ಯ, ಜ.23 (Daijiworld News/PY) : ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ಎಂಬಲ್ಲಿನ ರಸ್ತೆ ಬದಿಯಲ್ಲಿನ ಕಟ್ಟಡಗಳ ತೆರವು ಕಾರ್ಯಾಚರಣೆಯು ಜ.22 ಬುಧವಾರದಂದು ಮಂಗಳೂರು ಎಡಿಸಿ ರೂಪ ಅವರ ಮುಂದಾಳತ್ವದಲ್ಲಿ ಹಾಗೂ ಪೋಲಿಸ್ ರಕ್ಷಣೆಯಲ್ಲಿ ನಡೆಯಿತು.
ಆದಿಸುಬ್ರಹ್ಮಣ್ಯದ ರಸ್ತೆಯ ಬದಿಯಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಆದರೆ ರಸ್ತೆ ಅಗಲೀಕರಣಕ್ಕೆ ರಸ್ತೆ ಬದಿಯ ಅಂಗಡಿಗಳು ಅಡ್ಡಿಯಾಗಿದ್ದು, ರಸ್ತೆ ಅಗಲೀಕರಣದ ಕಾರ್ಯ ನಿಧಾನವಾಗಿ ಸಾಗುತ್ತಿತ್ತು ಎಂಬುದಾಗಿ ಸಾರ್ವಜನಿಕರ ಆರೋಪವಾಗಿತ್ತು.
ಈ ಹಿನ್ನೆಲೆ ಜ.22ರಂದು ರಸ್ತೆ ಬದಿಯಲ್ಲಿದ್ದ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ಮಾಡಲಾಯಿತು. ಕಟ್ಟಡ ಹಾಗೂ ಅಂಗಡಿಗಳ ತೆರವು ಕಾರ್ಯ ನಡೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಉದ್ದೇಶದಿಂದ, ಪೊಲೀಸ್ ಅಧಿಕಾರಿಗಳ ನಿಯೋಜನೆಯನ್ನು ಮಾಡಲಾಗಿತ್ತು. ಸುಬ್ರಹ್ಮಣ್ಯ ಠಾಣಾಧಿಕಾರಿ ಒಮನಾ ಸೇರಿದಂತೆ, ಸುಳ್ಯ, ಬೆಳ್ಳಾರೆ ಠಾಣೆಗಳ ಪೋಲಿಸ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.