ಉಡುಪಿ, ಜ.23 (Daijiworld News/PY) : ಉಡುಪಿಯ ಪ್ರಸಿದ್ದ ಉದ್ಯಮಿ, ಕ್ರಿಕೆಟಿಗ ಹಾಗೂ ಸಂಘಟಕರಾಗಿದ್ದ ಅಲೆಕ್ಸ್ ಲೂಯಿಸ್ (45) ಅವರು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಉದ್ಯಾವರದ ಬೋಲಾರ್ಗುಡ್ಡೆ ನಿವಾಸಿಯಾಗಿದ್ದ ಅಲೆಕ್ಸ್ ಅವರು ತಮ್ಮ ಡಿಎನ್ಎ ಹೋಮ್ ಥಿಯೇಟರ್ ವ್ಯವಹಾರವನ್ನು ನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಜ.22ರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲೆಕ್ಸ್ ಅವರು ನುರಿತ ಕ್ರಿಕೆಟಿಗ, ಅಲ್ಲದೇ ಇವರು ಹಲವಾರು ಯುವ ಕ್ರಿಕೆಟಿಗರನ್ನು ಪ್ರೋತ್ಸಾಹಿಸಿ, ಪ್ರೇರೇಪಿಸಿದ್ದರು. ಕೆಲವು ವರ್ಷಗಳ ಹಿಂದೆ ಉದ್ಯಾವರದಲ್ಲಿ ರಾಷ್ಟ್ರಮಟ್ಟದ ಫ್ಲಡ್ಲಿಟ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲು ಮುಂದಾಗಿದ್ದರು. ಅಲೆಕ್ಸ್ ಅವರು ತಮ್ಮ ವ್ಯವಹಾರ ಅಭಿವೃದ್ದಿ ಪಡಿಸುವ ಜೊತೆಗೆ ಅನೇಕ ಜನರಿಗೆ ಉದ್ಯೋಗ ನೀಡಿದ್ದಾರೆ. ಅಲೆಕ್ಸ್ ಅವರದ್ದು ಸರಳ ಹಾಗೂ ನೇರ ಸ್ವಭಾವದ ವ್ಯಕ್ತಿಯಾಗಿದ್ದು, ಇತರರೊಂದಿಗೆ ಚೆನ್ನಾಗಿ ಮಾತನಾಡುತ್ತಿದ್ದರು ಎನ್ನಲಾಗಿದೆ.
ಅಲೆಕ್ಸ್ ಅವರು ಪತ್ನಿ ಸೀಮಾ ಹಾಗೂ ಮಕ್ಕಳಾದ ಆರನ್, ಆಲ್ಡನ್ ಮತ್ತು ಡ್ಯಾರೆನ್ ಅವರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.