ಮಂಗಳೂರು, ಜ 23 (DaijiworldNews/SM): ರಸ್ತೆಯಲ್ಲಿ ನಡೆದುಕೊಂಡು ಹೋಗುವ ಒಬ್ಬಂಟಿ ಮಹಿಳೆಯರ ಕುತ್ತಿಗೆಯಲ್ಲಿದ್ದ ಸರ ಸುಲಿಗೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರಿನ ಉರ್ವ ಪೊಲೀಸರು ಯಶಸ್ವಿಯಾಗಿದ್ದಾರೆ. ಬಡಗ ಉಳಿಪಾಡಿ ಮಳಲಿ ಮಟ್ಟಿ ನಿವಾಸಿ ವಿನಯ ಪ್ರಸಾದ್ ಯಾನೆ ವಿನೋದ್ ಜೋಗಿ (27) ಬಂಧಿತ ಆರೋಪಿ.
ಈತನ ವಿರುದ್ಧ ದಾಖಲಾಗಿದ್ದ 10 ಪ್ರಕರಣಗಳನ್ನು ಪತ್ತೆ ಮಾಡಿ ವಿವಿಧೆಡೆ ಅಡಮಾನ ಇರಿಸಿದ್ದ ಸುಮಾರು 300 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ವೌಲ್ಯ 12 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಬೈಕ್ ಮತ್ತು ಆಟೋ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ. ಚಿನ್ನಾಭರಣ ಸಹಿತ ಇವೆಲ್ಲವುಗಳ ಒಟ್ಟು ವೌಲ್ಯ 14 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಯ ವಿರುದ್ಧ ಕಾವೂರು ಠಾಣೆಯಲ್ಲಿ ಎರಡು, ಪೂರ್ವ (ಕದ್ರಿ), ಬರ್ಕೆ, ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ.
ಆರೋಪಿ ನಡೆದುಕೊಂಡು ಹೋಗುತ್ತಿದ್ದ ಒಬ್ಬಂಟಿ ಹೆಂಗಸರನ್ನೇ ತನ್ನ ಕೃತ್ಯಕ್ಕೆ ಗುರಿಯಾಗಿರಿಸಿಕೊಳ್ಳುತ್ತಿದ್ದ ಎಂಬುವುದು ತನಿಖೆಯಿಂದ ತಿಳಿದುಬಂದಿದೆ. ಅವರ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ ಮಾಡಿದ ಪರಾರಿಯಾಗುತ್ತಿದ್ದ ಆರೋಪ ಈತನ ಮೇಲಿದೆ.
ಸದ್ಯ ತನಿಖೆ ಮುನ್ನಡೆಸಲಾಗಿದೆ.