ಮಂಗಳೂರು, ಜ 24 (Daijiworld News/MSP): ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯ ರಾವ್ನನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು 10 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇನ್ನು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲು ಆರೋಪಿ ಬಾಂಬ್ ತಯಾರಿಸಲು ಚೆನ್ನೈಯಿಂದ ರಾಸಾಯನಿಕಗಳನ್ನು ತರಿಸಿರುವುದಾಗಿ ಮಾಹಿತಿ ನೀಡಿರುವುದರಿಂದ ಪೊಲೀಸರು ಹೆಚ್ಚಿನ ತನಿಖೆಗೆ ಅಲ್ಲಿಗೂ ಕರೆದೊಯ್ಯಲು ಸಿದ್ಧತೆ ಮಾಡಿಕೊಂಡಿದೆ.
ಬಾಂಬ್ ತಯಾರಿಸಲು ಅಗತ್ಯ ಇದ್ದ ರಾಸಾಯನಿಕ ಹಾಗೂ ಇತರ ವಸ್ತುಗಳನ್ನು ಚೆನ್ನೈನಿಂದ ಆನ್ ಲೈನ್ ಮೂಲಕ ಆರ್ಡರ್ ಮಾಡಿಕೊಂಡು ತರಿಸುತ್ತಿದ್ದ ಬಗ್ಗೆ ಅದಿತ್ಯ ರಾವ್ ಪೊಲೀಸ್ ವಿಚಾರಣೆಯಲ್ಲಿ ಮಾಹಿತಿ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಹಿನ್ನಲೆಯಲ್ಲಿ ಆತನನ್ನು ಚೆನ್ನೈಗೆ ಕರೆದೊಯ್ಯುವ ಸಾಧ್ಯತೆ ಇದೆ.
ಇದರೊಂದಿಗೆ ಆದಿತ್ಯರಾವ್ ವಿಮಾನನಿಲ್ದಾಣದಲ್ಲಿ ಬಾಂಬ್ ಇರಿಸುವ ಮೊದಲು ತಂಗಿದ್ದ ಮತ್ತು ಕೆಲಸ ಮಾಡಿದ್ದ ತಾಣಗಳಿಗೂ ಕರೆದೊಯ್ದು ತನಿಖೆ ಮಾಡುವ ಸಾಧ್ಯತೆ ಇದೆ.