ಶಿರ್ವ, ಜ 24(Daijiworld News/MSP): ರಸ್ತೆಯ ಸೌಂದರ್ಯವನ್ನು ಇಮ್ಮಡಿಗೊಳಿಸುವ ಹಾಗೂ ಗಿಡಮರಗಳನ್ನು ನೆಟ್ಟು ಪೋಷಿಸುವ ಸಲುವಾಗಿ ಹಲವು ನಗರ ಪಟ್ಟಣಗಳ ಬಹುತೇಕ ರಸ್ತೆ ವಿಭಜಕಗಳ ನಡುವೆ ಸಸಿಗಳನ್ನು ನೆಡುವ ಪದ್ದತಿ ಇದೆ. ಆದರೆ ಇದು ಶಿರ್ವ ಮಂಚಕಲ್ ಪೇಟೆಯಲ್ಲಿ ಮಾತ್ರ ಪಾಲನೆಯಾಗಿರಲಿಲ್ಲ. ರಸ್ತೆ ವಿಭಾಜಕ ನಿರ್ಮಾಣ ಮಾಡಿ ಅಲ್ಲಿ ಕಸ ಕಡ್ದಿ ತುಂಬಿಕೊಳ್ಳುವಂತೆ ಹಾಗೆಯೇ ಬಿಡಲಾಗಿತ್ತು.
ಇದ್ಯಾಕೋ ಸರಿಕಾಣದ ಶಿರ್ವದ ಗೂಡ್ಸ್ ಟೆಂಪೋ ಚಾಲಕ-ಮಾಲಕರಾಗಿರುವ ಜಾಫರ್ ಸಾಹೇಬ್ ತಮ್ಮ ಬಿಡುವಿನ ಅವಧಿಯನ್ನು ರಸ್ತೆ ವಿಭಜಕಗಳಲ್ಲಿ ಗಿಡಗಳ ನೆಟ್ಟು ಬೆಳೆಸುವ ಕಾಯಕಕ್ಕೆ ಕೈ ಹಾಕಿದ್ದಾರೆ. ಇವರ ಶ್ರಮ ಫಲವಾಗಿ ಇದೀಗ ರಸ್ತೆ ವಿಭಜಕಗಳ ಮಧ್ಯೆ ಗಿಡಗಳು ಹೂವಿನಿಂದ ನಳನಳಿಸುತ್ತಿದೆ.
ಟೆಂಪೋ ಸ್ಟಾಂಡ್ನ ಎದುರುಗಡೆಯಲ್ಲಿ ಬಾಡಿಗೆಗಾಗಿ ಗಿರಾಕಿಗಳಿಗಾಗಿ ಕಾಯುತ್ತಾ ಸಮಯ ಕಳೆಯುವ ಬದಲು, ಖಾಲಿ ಯಾಗಿರುವ ರಸ್ತೆ ವಿಭಾಜಕದಲ್ಲಿ ಮಣ್ಣು ತುಂಬಿಸಿದ್ದಾರೆ. ಮಳೆರಾಯನ ಆಗಮನವಾಗುತ್ತಿದ್ದಂತೆ , ಬಿಸಿಲಿನ ತೀವ್ರತೆ ಸಹಿಸಬಲ್ಲ, ಕಡಿಮೆ ನೀರು ಬೇಕಾಗಿರುವ ಬಣ್ಣ ಬಣ್ಣದ ಸದಾಪುಷ್ಟ ಸಹಿತ ಹಲವು ಅಲಂಕಾರಿಕ ಗಿಡಗಳನ್ನು ನೆಟ್ಟಿದ್ದಾರೆ.
ಮಾತ್ರವಲ್ಲ ದಿನಂಪ್ರತಿ ಅವುಗಳು ಬಾಡಿ ಹೋಗದಂತೆ ನೀರುಣಿಸಿ ಪೋಷಿಸಿದ್ದಾರೆ. ಇವರ ಶ್ರಮದ ಫಲವಾಗಿ ಶಿರ್ವ ಮಂಚಕಲ್ ಪೇಟೆ ಟೆಂಪೋ ಸ್ಟಾಂಡ್ನ 300 ಮೀಟರ್ ನಷ್ಟು ರಸ್ತೆ ವಿಭಾಜಕದಲ್ಲಿ ಹೂವಿನ ಗಿಡಗಳು ನಳನಳಿಸುತ್ತಿವೆ. ಜಾಫರ್ ಸಾಹೇಬರ ಪರಿಸರ ಕಾಳಜಿಯನ್ನು ಕಂಡು ಸರ್ವಾಜನಿಕರು ಅವರಿಗೊಂದು 'ಸಲಾಂ' ಎನ್ನುತ್ತಿದ್ದಾರೆ.