ಮಂಗಳೂರು, ಜ 24 (Daijiworld News/MSP): ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯ ರಾವ್ನನ್ನು ಗುರುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು 10 ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಈ ಹಿನ್ನಲೆಯಲ್ಲಿ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತನಿಖಾ ತಂಡ, ಜ 24 ರ ಶುಕ್ರವಾರ ಬಾಂಬ್ ಇರಿಸಿದ್ದ ಸ್ಥಳವಾದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.
ಯಾವುದೇ ಆತಂಕ, ಭಯವಿಲ್ಲದೇ ಬಾಂಬರ್ ಆದಿತ್ಯ ರಾವ್, ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತನಿಖಾ ತಂಡದ ಮುಂದೆ ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟು ಪರಾರಿಯಾದ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದಾರೆ. ತಾನು ಮೊದಲು ಬಂದು ಇಳಿದಿದ್ದ ಸ್ಥಳ ಬಗ್ಗೆ ವಿವರಿಸಿ ಬಳಿಕ ಎಂಟ್ರಿ ಗೇಟ್ ಮೂಲಕ ಒಳಪ್ರವೇಶಿಸಿ, " ಇಲ್ಲೇ ಬಾಂಬ್ ಇದ್ದ ಬ್ಯಾಗ್ ಇರಿಸಿ"ದ್ದಾಗಿ ಕಬ್ಬಿಣದ ಚೇರ್ ವೊಂದನ್ನು ತೋರಿಸಿದ್ದಾನೆ. ಆ ಬಳಿಕ ಅಲ್ಲಿಂದ ಅವಸರವಸರವಾಗಿ ಹೊರಟು ಎಕ್ಸಿಟ್ ಗೇಟ್ ಬಳಿ ಸಿಕ್ಕ ರಿಕ್ಷಾ ಹತ್ತಿ ಅಲ್ಲಿಂದ ಹೊರಬಂದಿರುವುದಾಗಿ ತಿಳಿಸಿದ್ದಾನೆ.
ಸ್ಪೋಟಕವಿರಿಸಿದ ಬಗ್ಗೆ ಅದಿತ್ಯರಾವ್ ನಿಂದ ಸಾಕಷ್ಟು ಮಾಹಿತಿ ಕಲೆ ಹಾಕಿದ ತಂಡ ಆ ಬಳಿಕ ಅಲ್ಲಿಂದ, ಅದಿತ್ಯರಾವ್ ಮತ್ತೊಂದು ಬ್ಯಾಗ್ ಇರಿಸಿದ್ದ ಸೆಲೂನ್ ಬಳಿ ಆತನನ್ನು ಕರೆದೊಯ್ದಿದ್ದಾರೆ, ಇದಲ್ಲದೆ ಸ್ಪೋಟಕವಿರಿಸುವ ಮುನ್ನ ಮಂಗಳೂರಿನ ಕುಡ್ಲ ಹೋಟೇಲ್ ಹಾಗೂ ಕಾರ್ಕಳದ ರೆಸ್ಟೋರೆಂಟ್ ಬಳಿಯೂ ಸ್ಥಳ ಮಹಜರು ನಡೆಸಿ ಸಾಕಷ್ಟು ಮಾಹಿತಿ ಕಲೆಹಾಕಲಿದ್ದಾರೆ ಎಂದು ತಿಳಿದುಬಂದಿದೆ.