ಮಂಗಳೂರು,ಜ 25(Daijiworld News/MSP): ಮಂಗಳೂರಿನ ಪಂಪ್ ವೆಲ್ ಪ್ಲೈ ಓವರ್ ಕಾಮಗಾರಿ ನವಯುಗ ಕಂಪೆನಿ ವಹಿಸಿಕೊಂಡು ಕಳೆದ 10 ವರ್ಷಗಳಿಂದ ಕಾಮಗಾರಿ ನಡೆಸುತ್ತಿದ್ದರೂ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ಕೊನೆಗೂ ಪಂಪ್ ವೆಲ್ ಕಾಮಗಾರಿ ಜನವರಿ ತಿಂಗಳಾಂತ್ಯದ ಮುಗಿಯುವಂತೆ ಕಾಣುತ್ತದೆ.
ನವಯುಗ ಕಂಪೆನಿಗೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಈ ಹಿಂದೆ ಡೆಡ್ ಲೈನ್ ಗಳ ಮೇಲೆ ಡೆಡ್ ಲೈನ್ ನೀಡಿದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿರಲಿಲ್ಲ. ಕಾಮಗಾರಿ ದಶಕದ ಇತಿಹಾಸ ಕಂಡು ಸಂಸದ ನಳಿನ್ ಕುಮಾರ್ ಸೇರಿ ಪಂಪ್ ವೆಲ್ ಪ್ಲೈ ಓವರ್ ಟ್ರೋಲಿಗರ ಆಹಾರವಾಗಿತ್ತು. ಇದೀಗ ಇದೆಲ್ಲದಕ್ಕೂ ಪೂರ್ಣವಿರಾಮ ನೀಡುವಂತೆ ಪಂಪ್ ವೆಲ್ ಪ್ಲೈ ಓವರ್ ಕಾಮಗಾರಿ ಶರವೇಗದ ಚುರುಕು ಪಡೆದು ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಲಾಖೆಯ ಅಧಿಕಾರಿಗಳ ಪ್ರಕಾರ ಜ.೨೯ ರ ಒಳಗೆ ಪ್ರಯಾಣಿಕ ಓಡಾಟಕ್ಕೆ ಈ ಮೇಲ್ಸೇತುವೆ ಸಿದ್ದವಾಗಲಿದೆ.
ಜನವರಿ 1ರಂದು ಕಾಮಗಾರಿ ಮುಗಿಸಿ ಉದ್ಘಾಟನೆಗೆ ಬಿಟ್ಟುಕೊಡದ ಕಾರಣ ಸಂಸದ ನಳಿನ್ ಕುಮಾರ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿ ನವಯುಗ ಕಂಪನಿ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡಿದ್ದರು. ಈ ವೇಳೆ ಜನವರಿ 31ರೊಳಗೆ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ನವಯುಗ ಕಂಪೆನಿ ತಿಳಿಸಿತ್ತು.ಸಂಸದನಾಗಿ ಎಲ್ಲಾ ನೆರವು ನೀಡಿದ್ದೇನೆ , ಎಲ್ಲಾ ಮಾಡಿದರೂ ಕಾಮಗಾರಿ ಪೂರ್ಣಗೊಳಿಸಿಲ್ಲ, ಫ್ಲೈ ಓವರ್ ಕಾಮಗಾರಿ ಮುಕ್ತಾಯಕ್ಕೆ 5 ಬಾರಿ ಡೆಡ್ ಲೈನ್ ನೀಡಲಾಗಿದೆ. ಯಾವಾಗ ಕಾಮಗಾರಿ ಮುಗಿಸುತ್ತೀರಿ ಎಂದು ಪ್ರಶ್ನಿಸಿದ ಅವರು ಲಿಖಿತ ರೂಪದಲ್ಲಿ ಮಾಹಿತಿ ನೀಡಿ ಎಂದ ಅವರು ಕಾಮಗಾರಿ ಮುಗಿಸದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.
ಇದೀಗ ಪಂಪ್’ವೆಲ್ ಮೇಲ್ಸೇತುವೆ ಬಹುತೇಕ ಪೂರ್ಣಗೊಂಡಿದ್ದು ಮೇಲ್ಸೇತುವೆ ಜೋಡಿಸಿದ ರಸ್ತೆಗಳಿಗೆ ಡಾಂಬರು ಕೆಲಸ ನಡೆಯುತ್ತಿದೆ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳು ಉಭಯ ಕಡೆಗಳಿಂದಲೂ ಕಾಮಗಾರಿ ಕಾಲಮಿತಿಯಲ್ಲಿ ಮುಗಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ ಎನ್ನಲಾಗಿದೆ.