ಬಂಟ್ವಾಳ, ಜ 25(Daijiworld News/MSP): ತಾಲೂಕಿನ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ನಲ್ಲೊಂದಾದ ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತದ ( ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್) ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ಜ.25 ರಂದು ಶನಿವಾರ ನಡೆಯಬೇಕಾಗಿದ್ದ ಚುನಾವಣೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡು ಪೊಲೀಸ್ ಭದ್ರತೆಯಲ್ಲಿ ಮತದಾನ ಪುನರಾರಂಭಗೊಂಡಿರುವ ಘಟನೆ ನಡೆದಿದೆ.
ಮತದಾರದ ಪಟ್ಟಿಯಲ್ಲಿ ಗೊಂದಲದ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದ ಹಿನ್ನಲೆಯಲ್ಲಿ ಚುನಾವಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಚುನಾವಣೆ ಹಿನ್ನಲೆಯಲ್ಲಿ ತಹಶಿಲ್ದಾರ್ ಕಚೇರಿಗೆ ಧಾವಿಸಿದ ಇತ್ತಂಡಗಳ ನಡುವೆ ಕಚೇರಿಯಲ್ಲಿಯೇ ಮಾತಿಗೆ ಮಾತು ಬೆಳೆದು ಮಾಜಿ ಸಚಿವ ರಮನಾಥ ರೈ, ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ನಾಗರಾಜು ಅವರ ಸಮ್ಮುಖದಲ್ಲೇ ಮಾರಾಮಾರಿ ನಡೆದಿದೆ. ಪರಿಸ್ಥಿತಿ ಕೈ ಮೀರಿ ಹೋಗುವಷ್ಟರಲ್ಲಿ ಮದ್ಯ ಪ್ರವೇಶಿಸಿದ ಪೊಲೀಸರು ಬೆಂಬಲಿಗರನ್ನು ಹೊರಕ್ಕೆ ಕಳುಹಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಆದರೆ, ಕಚೇರಿಯ ಸುತ್ತ ಸಿಆರ್ ಪಿ ತುಕಡಿ ಸಹಿತ ಪೊಲೀಸರನ್ನು ನಿಯೋಜನೆಗೊಳಿಸಲಾಗಿದ್ದು, ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿದೆ
ನಂತರ ಎಲ್ಲಾ ಅಭ್ಯರ್ಥಿಗಳ ಸಮ್ಮುಖದಲ್ಲಿ ಮಾತುಕತೆ ನಡೆಸಿ ಪೊಲೀಸರ ಭದ್ರತೆಯಲ್ಲಿ ಮತದಾನ ಮುಂದುವರಿದಿದ್ದು, ಸ್ಥಳದಲ್ಲಿ ಇನ್ನೂ ಬಿಗು ವಾತಾವರಣ ಮುಂದುವರಿದಿದೆ ಎದು ತಿಳಿದುಬಂದಿದೆ.