ಮಂಗಳೂರು ಜ 25 (Daijiworld News/MSP): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡರಾದ ಪ್ರಹ್ಲಾದ್ ಜೋಶಿ, ರೇಣುಕಾಚಾರ್ಯ, ಈಶ್ವರಪ್ಪ ಮತ್ತು ಬಸವರಾಜ್ ಬೊಮ್ಮಯಿ ತಕ್ಷಣ ಜನತೆಯಲ್ಲಿ ಕ್ಷಮೆಯಾಚಿಸಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಒತ್ತಾಯಿಸಿದ್ದಾರೆ.
ಜ.25 ರ ಶನಿವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಮಿಥುನ್ ರೈ, "ಬಿಜೆಪಿ ಮುಖಂಡರ ಹೇಳಿಕೆಗಳಿಂದಾಗಿ ಕೋಮು ದೌರ್ಜನ್ಯ, ಶಾಂತಿ ಮತ್ತು ಸೌಹಾರ್ದತೆಗೆ ಭಂಗ ಉಂಟಾಗುವ ಸಾಧ್ಯತೆ ಇತ್ತು, ಹೀಗಾಗಿ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕಾಗಿದೆ. "ಬಾಂಬ್ ಪತ್ತೆಯಾದ ವೇಳೆ ಎಲ್ಲರೂ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದರು. ಅಪರಾಧಿಗೆ ಯಾವುದೇ ಜಾತಿ ಧರ್ಮವಿಲ್ಲ. ಮಂಗಳೂರು ಒಳ್ಳೆಯ ಸುದ್ದಿಗಳಿಂದ ಪ್ರಸಿದ್ಧವಾಗಬೇಕು ಹೊರತು ಕೆಟ್ಟ ಕಾರಣಗಳಿಗಾಗಿ ಅಲ್ಲ ಎಂದು ಇದೇ ವೇಳೆ ಹೇಳಿದರು.
ಪೊಲೀಸರು ಮಾಧ್ಯಮ ವರದಿಗಳಿಗೆ ನೀಡಿದ ಪ್ರಕಾರ ಅದೊಂದು ಸಜೀವ ಬಾಂಬ್ ಆಗಿತ್ತು, ಬಾಂಬ್ ತಯಾರಿಕೆಗೆ ಬೇಕಾದ ಆರ್ಡಿಎಕ್ಸ್ ಎಲ್ಲಿಂದ ಬಂತು ಹಾಗೂ ಅದನ್ನು ನೀಡಿದರು ಯಾರು ? ಹಾಗೂ ಪ್ರಕರಣ ಹಿಂದೆ ಯಾರು ಶಾಮೀಲಾಗಿದ್ದಾರೆ ಎನ್ನುವುದರ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು
ಗೋಲಿಬಾರ್ ಮತ್ತು ಬಾಂಬ್ ಪತ್ತೆ ಘಟನೆಯಿಂದಾಗಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಕುಂಠಿತವಾಗುತ್ತಿದ್ದು ನಾವು 10 ವರ್ಷಗಳ ಹಿಂದಕ್ಕೆ ಹೋಗುತ್ತಿದ್ದೇವೆ. ಮಂಗಳೂರು ಕೋಮು ದೌರ್ಜನ್ಯದ ಪ್ರಯೋಗಾಲಯವಾಗುತ್ತಿದ್ದು, ಬಹುರಾಷ್ಟ್ರೀಯ ಕಂಪನಿಗಳು ಮಂಗಳೂರಿನಲ್ಲಿ ಹೂಡಿಕೆ ಮಾಡಲು ತಯಾರಿಲ್ಲ. ಹೀಗಾಗಿ ಇಂತಹ ಘಟನೆಗಳನ್ನು ಜಿಲ್ಲಾ ಯುವ ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಮಿಥುನ್ ರೈ ಹೇಳಿದರು.
ಯುಪಿ ಅಥವಾ ಬಿಹಾರದಲ್ಲಿ ಮಾತ್ರ ನಡೆಯುವ ಗೋಲಿಬಾರ್, ಬಾಂಬ್ ಬೆದರಿಕೆ ಹಾಗೂ ಇತ್ತೀಚಿನ ಆಸಿಡ್ ದಾಳಿ ಮಂಗಳೂರಿಗೆ ಹೊಸದು. ಕರಾವಳಿಯ ನಗರ ಬೆಂಗಳೂರು ಮತ್ತು ಮುಂಬೈನಂತಹ ಮಹಾನಗರಗಳೊಂದಿಗೆ ಸ್ಪರ್ಧಿಸಬೇಕು ಹೊರತು ಯುಪಿ ಮತ್ತು ಬಿಹಾರದೊಂದಿಗೆ ಸ್ಪರ್ಧಿಸಬಾರದು. ಒಂದು ವೇಳೆ ಬಾಂಬರ್ ಆದಿತ್ಯ ರಾವ್ ಬದಲಾಗಿ ಹೆಸರು ಬೇರೆ ಯಾವುದಾದರೂ ಇರುತ್ತಿದ್ದರೆ ಯಾವ ಪರಿಸ್ಥಿತಿ ಜಿಲ್ಲೆಯಲ್ಲಿ ಇರುತ್ತಿತ್ತು ಎಂದು ಮಿಥುನ್ ರೈ ಪ್ರಶ್ನಿಸಿದರು .
ಕಾರ್ಪೋರೇಟರ್ ಎ ಸಿ ವಿನಯರಾಜ್, ಪ್ರವೀಣ್ ಚಂದ್ರ ಅಳ್ವಾ ಮತ್ತು ಇತರರು ಉಪಸ್ಥಿತರಿದ್ದರು.