ಕಾಸರಗೋಡು, ಜ 26 (Dajiworld News/MB) :ಮೀಯಪದವು ವಿದ್ಯಾವರ್ಧಕ ಶಾಲೆಯ ಶಿಕ್ಷಕಿ ರೂಪಾಶ್ರೀ (44) ಕೊಲೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು , ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆಯಲು ತನಿಖಾ ತಂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಬಂಧಿತ ಆರೋಪಿಗಳಾದ ಇದೆ ಶಾಲೆಯ ಚಿತ್ರಕಲಾ ಶಿಕ್ಷಕ ಕೆ. ವೆಂಕಟ್ರಮಣ ಕಾರಂತ (50) ಮತ್ತು ಚಾಲಕ ನಿರಂಜನ ( 25) ರವರನ್ನು ಶುಕ್ರವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು , ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಗಳು ಕಸ್ಟಡಿಗೆ ಲಭಿಸಿದ್ದಲ್ಲಿ ಇನ್ನಷ್ಟು ಮಾಹಿತಿ ಕಲೆ ಹಾಕಲು ಸಾಧ್ಯ ಇದೆ ಎಂದು ಕ್ರೈಂ ಬ್ರಾಂಚ್ ಅಧಿಕಾರಿಗಳು ತಿಳಿಸಿದ್ದಾರೆ.
ರೂಪಾಶ್ರೀಯನ್ನು ಮುಳುಗಿಸಿ ಉಸಿರುಗಟ್ಟಿಸಿ ಕೊಲೆಗೈಯ್ಯಲು ಯತ್ನಿಸಿದ ಬಕೆಟ್ ಮತ್ತು ಡ್ರಮ್ವೊಂದನ್ನು ಪೊಲೀಸರು ಮನೆಯಿಂದ ವಶಕ್ಕೆ ತೆಗೆದುಕೊಂಡಿದ್ದಾರೆ.
ಮೊದಲು ಇಬ್ಬರು ಸೇರಿ ರೂಪಾಶ್ರೀಯ ಮುಖವನ್ನು ಬಕೆಟ್ ನೀರಿನಲ್ಲಿ ಮುಳುಗಿಸಿದ್ದು , ಈ ಸಂದರ್ಭದಲ್ಲಿ ಬಕೆಟ್ ಬಿರುಕು ಬಿಟ್ಟಿದೆ. ಬಳಿಕ ಸುಮಾರು 250 ಲೀಟರ್ ಸಾಮಥ್ರ್ಯದ ಡ್ರಮ್ ನಲ್ಲಿ ಮುಳುಗಿಸಿ ಕೊಲೆ ಮಾಡಿರುವುದು ಕಂಡು ಬಂದಿದೆ.
ಕೃತ್ಯದ ಸಂದರ್ಭದ ಲ್ಲಿ ಆರೋಪಿ ಶಿಕ್ಷಕ ಧರಿಸಿದ್ದ ಪ್ಯಾಂಟ್ , ಬನಿಯನ್ ಮೊದಲಾದವುಗಳನ್ನು ಉರಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಿರುವುದು ತನಿಖೆಯಿಂದ ತಿಳಿದು ಬಂದಿದೆ .
2003 ರಿಂದ ಮೀಯಪದವು ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿರುವ ವೆಂಕಟ್ರಮಣ ಕಾರಂತನು ಅರ್ಚಕನಾಗಿಯೂ ಕೆಲಸ ನಿರ್ವಹಿಸುತ್ತಿದ್ದ . 2014 ರಲ್ಲಿ ರೂಪಾಶ್ರೀ ಈ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದರು. ಇಬ್ಬರ ನಡುವೆ ಸಂಬಂಧವು ಬೆಳೆಯಿತು . ಆರ್ಥಿಕ ವ್ಯವಹಾರವು ಇಬ್ಬರ ನಡುವೆ ನಡೆದಿತ್ತು . ಈ ನಡುವೆ ರೂಪಶ್ರೀ ಇನ್ನೋರ್ವ ಶಿಕ್ಷಕನ ಜೊತೆ ನಿಕಟವಾಗಿರುವುದಾಗಿ ಸಂಶಯಗೊಂಡ ಈತ ಈಕೆ ವಿರುದ್ಧ ದ್ವೇಷ ಸಾಧಿಸಿ ಕೊಲೆ ನಡೆಸಲು
ಯೋಜನೆ ಹಾಕಿದ್ದನು.
ಜನವರಿ 16 ರಂದು ಮಧ್ಯಾಹ್ನ ರೂಪಾಶ್ರೀ ರಜೆ ಹಾಕಿ ಶಾಲೆಯಿಂದ ತೆರಳಿದ್ದನು. ದಾರಿ ಮಧ್ಯೆ ಈಕೆ ಸ್ಕೂಟರ್ ನಿಲ್ಲಿಸಿ ವೆಂಕಟರಮಣ ಕಾರಂತರ ಕಾರಿನಲ್ಲಿ ತೆರಳಿದ್ದು, ಬಳಿಕ ಮನೆಗೆ ಕರೆದುಕೊಂಡು ಹೋಗಿದ್ದು , ಶಿಕ್ಷಕನ ಪತ್ನಿ ಮತ್ತು ಪುತ್ರಿ ಮಂಗಳೂರಿನಲ್ಲಿ ವಿವಾಹಕ್ಕೆ ತೆರಳಿದ್ದರು. ಇದರಿಂದ ತನ್ನ ಮನೆಯಲ್ಲೇ ಕೊಲೆ ನಡೆಸಿದ್ದು, ಮೊದಲು ಹಾಕಿದ ಯೋಜನೆಯಂತೆ ನಿರಂಜನ ನೆರವಿನಿಂದ ಈತ ರೂಪಾಶ್ರೀಯನ್ನು ಕೊಲೆ ಮಾಡಲಾಗಿದೆ. ಅಪಾಯ ಅರಿತ ರೂಪಾಶ್ರೀ ವೆಂಕಟ್ರಮಣನ ಕೈಯಿಂದ ತಪ್ಪಿಸಿ ಪರಾರಿಯಾಗಲೆತ್ನಿಸಿದ್ದಾಳೆ . ಆದರೆ ನಿರಂಜನನ ಸಹಾಯದಿಂದ ಕೃತ್ಯ ನಡೆಸಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಕಾರಿನ ಡಿಕ್ಕಿಯಲ್ಲಿ ಮೃತದೇಹ ಇರಿಸಿ 90 ಕಿ.ಮೀ ನಷ್ಟು ಸುತ್ತಾಡಿದ್ದ ಹಂತಕ !
ಮೃತದೇಹವನ್ನು ಎಳೆದುಕೊಂಡು ಬಂದು ಗೋಣಿಯಲ್ಲಿ ತುಂಬಿಸಿ ಕಾರಿನ ಡಿಕ್ಕಿಯಲ್ಲಿರಿಸಿದ್ದಾರೆ. ಈ ನಡುವೆ ಮಂಗಳೂರಿಗೆ ತೆರಳಿದ್ದ ಪತ್ನಿ ಮತ್ತು ಪುತ್ರಿ ತಾವು ಹೊಸಂಗಡಿಗೆ ತಲಪಿರುವುದಾಗಿ ಮೊಬೈಲ್ಗೆ ಕರೆ ಮಾಡಿದ್ದು, ಮೃತದೇಹ ಇದ್ದ ಕಾರಿನಲ್ಲೇ ಹೊಸಂಗಡಿಗೆ ತೆರಳಿ ಪತ್ನಿ, ಪುತ್ರಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ.
ರಾತ್ರಿ ಏಳು ಗಂಟೆಗೆ ವಿಟ್ಲದಲ್ಲಿ ಪೂಜೆ ಇರುವುದಾಗಿ ಮನೆಯಲ್ಲಿ ಹೇಳಿ ನಿರಂಜನ ಜೊತೆ ವೆಂಕಟ್ರಮಣ ಮೃತದೇಹ ಇದ್ದ ಕಾರಿನಲ್ಲಿ ನೇರ ವಿಟ್ಲಕ್ಕೆ ತೆರಳಿದ್ದು , ಅಲ್ಲಿ ಮೊದಲು ಒಪ್ಪಿಕೊಂಡ ಪೂಜೆ ನಡೆಸಲು ಆಗುವುದಿಲ್ಲ ಎಂದು ಪದಾಧೀಕಾರಿಗಳಿಗೆ ತಿಳಿಸಿ ಅಲ್ಲಿಂದ ಬಿ ಸಿ ರೋಡ್ ಮೂಲಕ ಪಂಪ್ವೆಲ್ಗೆ ತಲಪಿದರು. ಆದರೆ ಮೃತದೇಹ ಎಸೆಯಲು ಯೋಜನೆ ಹಾಕಿದರು . ಸಾಧ್ಯವಾಗಲಿಲ್ಲ. ಬಳಿಕ ಅಲ್ಲಿನ ಹೋಟೆಲ್ ವೊಂದರಲ್ಲಿ ಆಹಾರ ಸೇವಿಸಿದ್ದಾರೆ. ರಾತ್ರಿ ಒಂಬತ್ತು ಗಂಟೆ ವೇಳೆಗೆ ಅಲ್ಲಿಂದ ಹೊರಟ ಇವರು ನೇರವಾಗಿ ತಲಪಿದ್ದು ಮಂಜೇಶ್ವರ ಕಣ್ವತೀರ್ಥ ಕಡಲ ಕಿನಾರೆಗೆ. ಅಲ್ಲಿ ಸಮುದ್ರಕ್ಕೆ ಮೃತದೇಹವನ್ನು ಎಸೆದು ಪರಾರಿಯಾಗಿದ್ದಾರೆ ಎಂದು ತನಿಖೆಯಿಂದ ಸ್ಪಷ್ಟಗೊಂಡಿದೆ.
ಜನವರಿ 17 ರಂದು ಪತಿ ಚಂದ್ರಶೇಖರ್ರವರು ಪತ್ನಿ ರೂಪಾಶ್ರೀ ನಾಪತ್ತೆಯಾಗಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದ್ದಂತೆ 18 ರಂದು ಕುಂಬಳೆ ಪೆರುವಾಡ್ ಕಡಲ ಕಿನಾರೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆದರೆ ತಲೆ ಗೂದಲು ಸಂಪೂರ್ಣ ಕಿತ್ತು ಹೋಗಿತ್ತು . ಮೃತದೇಹ ವಿವಸ್ತ್ತ್ರವಾಗಿತ್ತು. ಇದರಿಂದ ಸಂಶಯ ಮತ್ತಷ್ಟು ಹೆಚ್ಚಾಯಿತು. ಸ್ಥಳೀಯ ಪೊಲೀಸರು ಹಾಗೂ ಕ್ರೈಂ ಬ್ರಾಂಚ್ ಬಳಿಕ ಹಂತಕ ಶಿಕ್ಷಕನ ಕುಕೃತ್ಯ ಬಯಲಿಗೆಳೆಯುವ ಮೂಲಕ ಅಪರಾಧಿಗಳನ್ನು ಜನರ ಮುಂದೆ ತರುವಲ್ಲಿ ಯಶಸ್ವಿಯಾಗಿದ್ದಾರೆ.