ಮಂಗಳೂರು, ಜ.26 (Daijiworld News/PY) : ಜ.27 ಸೋಮವಾರದಂದು ಕೂಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯುವ ಜನ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಉರ್ವಸ್ಟೋರ್ ಮಾರ್ಕೆಟ್ ವ್ಯಾಪಾರಿಗಳಲ್ಲಿ ಮನವಿ ಮಾಡಿದರು.
ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನಡೆಸಿ ಮಾತನಾಡಿದ ಅವರು, "ಪೌರತ್ವ ತಿದ್ದುಪಡಿ ಕಾಯ್ದೆ ಇಂದು ನಿನ್ನೆಯದ್ದಲ್ಲ. ಆ ಕಾಯ್ದೆ ತಿದ್ದುಪಡಿಯ ವಿಚಾರ ಸುಧೀರ್ಘ ಇತಿಹಾಸವಿದೆ. ಇಂದಿರಾಗಾಂಧಿ ಸಹಿತ ಅನೇಕ ಕಾಂಗ್ರೆಸ್ ಮುಖಂಡರೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲು ಮುಂದಾಗಿದ್ದರು. ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೆ ಕಾಯ್ದೆ ಜಾರಿಗೊಳಿಸಲು ಕೇಳಿಕೊಂಡಿದ್ದ ದಾಖಲೆಗಳಿವೆ" ಎಂದರು.
"ರಾಜಕೀಯ ವಿಚಾರವಾಗಿ ವಿರೋಧ ಪಕ್ಷಗಳು ಸತ್ಯವನ್ನು ಮರೆಮಾಚಿ ಸುಳ್ಳು ಸುದ್ಧಿಗಳನ್ನೇ ಪ್ರಚಾರಪಡಿಸುತ್ತಿದೆ. ಕಾಯ್ದೆಯ ಕುರಿತು ಸ್ವಲ್ಪವೂ ಮಾಹಿತಿ ಇಲ್ಲದೆ ಜನರನ್ನು ದಿಕ್ಕುತಪ್ಪಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ನಾಳೆ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಜನ ಜಾಗೃತಿ ಮೂಡಿಸಲು ಸಾರ್ವಜನಿಕ ಸಭೆ ಆಯೋಜಿಸಲಾಗಿದೆ. ಸತ್ಯವನ್ನು ಸುಳ್ಳಿನ ಮೂಲಕ ಮುಚ್ಚಿಡಲು ಸಾಧ್ಯವಿಲ್ಲ. ವಿರೋಧ ಪಕ್ಷಗಳ ಸುಳ್ಳಿನ ಸೌಧ ಬೇಗನೆ ಕುಸಿದು ಬೀಳಲಿದೆ" ಎಂದರು.
"ಜ.27 ಸೋಮವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಾಯ್ದೆಯ ಕುರಿತು ಮಾಹಿತಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರತಿಯೊಬ್ಬರಿಗೂ ಅವಕಾಶವಿದೆ. ಮಹಿಳೆಯರು, ಮಕ್ಕಳೂ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾಯ್ದೆಯ ಕುರಿತು ಅರಿತುಕೊಳ್ಳಬೇಕೆಂದು" ಮನವಿ ಮಾಡಿದರು.