ಮಂಗಳೂರು, ಜ 26 (DaijiworldNews/SM): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಇದೀಗ ಖಾಕಿ ಕೈಯಲ್ಲಿರುವ ಆದಿತ್ಯರಾವ್ ಕುರಿತಂತೆ ಸುಳ್ಳು ಸುದ್ದಿಯೊಂದನ್ನು ರವಾನೆ ಮಾಡಲಾಗುತ್ತಿದ್ದು, ಇದರ ವಿರುದ್ಧ ಮಂಗಳೂರು ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಡಾ. ಹರ್ಷಾ ಈಗಾಗಲೇ ಸುಳ್ಳು ಸುದ್ದಿ ಪಸರಿಸುವವರ ವಿರುದ್ಧ ನೋಟೀಸ್ ಜಾರಿಗೊಳಿಸಲಾಗಿದೆ. ಇಂತಹ ಸುಳ್ಳು ಸುದ್ದಿ ಪಸರಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇಂತಹ ಸುದ್ದಿ ಪಸರಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಎಚ್ಚರಿಸಿದ್ದಾರೆ.
ಇನ್ನು ಗೋಲ್ಡ್ ಪಿಂಚ್ ಹೊಟೇಲನ್ನು ಆದಿತ್ಯರಾವ್ ಟಾರ್ಗೆಟ್ ಮಾಡಿದ್ದ ಎಂಬ ಸುಳ್ಳು ಸುದ್ದಿಯೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಹರಡಿದ್ದು, ಇದರ ವಿರುದ್ಧ ಪೊಲೀಸರು ಅಲರ್ಟ್ ಆಗಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಕಮಿಷನರ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೂ ಈ ಸುದ್ದಿಯನ್ನು ಫಾರ್ವರ್ಡ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.