ಕುಂದಾಪುರ, ಜ 27 (Daijiworld News/MB) : ಮುಂಬೈ ಉದ್ಯಮಿಯೋರ್ವ ಭಾನುವಾರ ಸಂಜೆ ನಗರದ ಸಮೀಪದ ಸಂಗಮ್ ಸೇತುವೆ ಮೇಲಿನಿಂದ ಹೊಳೆಗೆ ಜಿಗಿದು ನಾಪತ್ತೆಯಾಗಿದ್ದು ಆತನ ಶೋಧ ಕಾರ್ಯ ನಡೆಯುತ್ತಿದೆ.
ಹೊಳೆಗೆ ಜಿಗಿದ ಮಂಬೈ ಉದ್ಯಮಿಯನ್ನು ಇಲ್ಲಿನ ಚಿಕ್ಕನ್ಸಾಲ್ ರಸ್ತೆ ನಿವಾಸಿ ಕೆ.ಜಿ.ಗಣೇಶ್ ಎಂದು ಗುರುತಿಸಲಾಗಿದ್ದು ಇವರು ದಾನಧರ್ಮದ ಮೂಲಕ ಪ್ರಸಿದ್ಧರಾಗಿದ್ದರು.
ಭಾನುವಾರ ಸಂಜೆಯ ವೇಳೆ ಕೆ.ಜಿ.ಗಣೇಶ್ ಅವರು ಸೇತುವೆ ಮೇಲಿನಿಂದ ಕೆಳಕ್ಕೆ ಜಿಗಿದದ್ದನ್ನು ನೋಡಿದ ಜನರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಡ ರಾತ್ರಿಯವರೆಗೂ ಶೋಧ ಕಾರ್ಯಚರಣೆ ನಡೆದಿದ್ದು, ಈಗಲೂ ಶೋಧ ಕಾರ್ಯಚರಣೆ ನಡೆಸಲಾಗುತ್ತಿದೆ.
ಮುಳುಗು ತಜ್ಞರು, ಅಗ್ನಿಶಾಮಕ ದಳ ಸಿಬ್ಬಂದಿಗಳ ನೆರವಿನಿಂದ ಸಂಗಮ್ ಹೊಳೆ, ಉಪ್ಪಿನಕುದ್ರು, ಹೇರಿಕುದ್ರು, ಆನಗಳ್ಳಿ ಮೊದಲಾದ ನದಿಯಲ್ಲಿ ಹುಡುಕಾಟ ನಡೆಸಲಾಗುತ್ತಿದ್ದು ಈವರೆಗೂ ಪತ್ತೆಯಾಗಿಲ್ಲ.
ಕೆ.ಜಿ.ಗಣೇಶ್ ಅವರು ವ್ಯವಹಾರದ ಮೂಲಕ ಜನಪ್ರಿಯರಾಗಿದ್ದು ಎಲ್ಲರೊಂದಿಗೆ ಪ್ರೀತಿ ಸ್ನೇಹ ಸಜ್ಜನಿಕೆಯಿಂದ ವರ್ತಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದು ಅವರು ನದಿಗೆ ಜಿಗಿದ ಕಾರಣವೇನು ಎಂದು ಈವರೆಗೂ ತಿಳಿದು ಬಂದಿಲ್ಲ.
ಹಾಗೆಯೇ ಅವರಿಗೆ ಆರ್ಥಿಕವಾಗಿ ಹಾಗೂ ಕೌಟುಂಬಿಕವಾಗಿ ಯಾವುದೇ ಸಮಸ್ಯೆಗಳು ಇಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಸಂಗಮ್ ಸೇತುವೆ ತಳಭಾಗ ಅಂದಾಜು 20 ಅಡಿ ಆಳವಿದೆ. ವ್ಯಕ್ತಿ ನದಿಗೆ ಜಿಗಿಯುವ ಸಂದರ್ಭದಲ್ಲಿ ಇಳಿತವಾಗಿತ್ತು. ಸಮುದ್ರಕ್ಕೆ ಮುಖವಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.