ಮಂಗಳೂರು, ಜ 27 (Daijiworld News/MB) : ನಗರದ ಪಂಪೆವಲ್ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರವೇ ಪೂರ್ಣ ಮಾಡಿ ಜನರಿಗೆ ಸಂಚಾರ ಮಾಡಲು ಅನುವು ಮಾಡಿಕೊಡಬೇಕೆಂದು ಹಲವು ವರ್ಷಗಳಿಂದ ನಾವು ಕೇಳುತ್ತಲೆ ಇದ್ದೆವು. ಆದರೆ ಸಂಸದರು ಕೈಚೆಲ್ಲಿ ಕುಳಿತಿದ್ದರು. ಆ ಹಿನ್ನಲೆಯಲ್ಲಿ ಜಿಲ್ಲಾಡಳಿತವೇ ಈ ಮೇಲ್ಸೇತುವೆ ಪೂರ್ಣ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಸೋಮವಾರ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದೆ.
ಈ ಸಂದರ್ಭದಲ್ಲಿ ಸಮಿತಿಯ ನೇತೃತ್ವ ವಹಿಸಿದ್ದ ಐವನ್ ಡಿಸೋಜಾರವರು ವರದಿಗಾರರೊಂದಿಗೆ ಮಾತನಾಡಿ, "ಸುಮಾರು ಹತ್ತು ವರ್ಷದ ಬಳಿಕ ಈ ಮೇಲ್ಸೇತುವೆ ಪೂರ್ಣವಾಗಿದ್ದು ಸಂಚಾರಕ್ಕೆ ಸಿದ್ಧವಾಗಿದೆ. ಇದಕ್ಕೆ ಕಾರಣ ಸಂಸದರಲ್ಲ ಜಿಲ್ಲಾಡಳಿತ" ಎಂದು ಅವರು ಹೇಳಿದ್ದಾರೆ.
ಹತ್ತು ವರ್ಷಗಳ ಹಿಂದೆ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದ್ದು ಸಂಸದರು ಹಲವು ಬಾರಿ ಕಾಮಗಾರಿ ಪೂರ್ಣವಾಗುವ ಗಡುವನ್ನು ನೀಡಿದ್ದರು. ಆದರೆ ಕಾಮಗಾರಿ ಪೂರ್ಣವಾಗಲೇ ಇಲ್ಲ. ಕಳೆದ ಜನವರಿ ಒಂದರಂದು ಕೊನೆಯ ಗಡುವು ನೀಡಿದ್ದಾರೆ. ಆದರೂ ಕಾಮಗಾರಿ ಪೂರ್ತಿಯಾಗದೆ ಅವರು ಕೈಬಿಟ್ಟಿದ್ದರು. ನಾನು ಹೇಳಿದರೂ ಕೇಳುವುದಿಲ್ಲ. ಆ ಬಳಿಕ ಈ ಕಾಮಗಾರಿಯನ್ನು ಜಿಲ್ಲಾಡಳಿತ ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ ಈ ಕಾಮಗಾರಿ ಕೈಗೆತ್ತಿಕೊಂಡ ಬಳಿಕ ಪಂಪ್ವೆಲ್ ಮೇಲ್ಸೇತುವೆ ವಾಹನ ಸಂಚಾರ ಮಾಡಲು ಸಾಧ್ಯವಾಗುವಷ್ಟು ಸಿದ್ಧವಾಗಿದೆ. ಸಂಸದರು ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಮಾಡುವುದನ್ನು ಕೈಬಿಟ್ಟ ಮೇಲಾದರೂ ಕಾಮಗಾರಿ ಇಷ್ಟಾದರೂ ಪೂರ್ಣವಾಗಿದೆ . ಈ ಹಿನ್ನಲೆಯಲ್ಲಿ ನಾನು ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕಳೆದ ಬಾರಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜ. 31 ರೊಳಗಾಗಿ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಜಿಲ್ಲಾಡಳಿತ ಹೇಳಿತ್ತು. ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಕೂಡಾ ಅದೇ ದಿನಾಂಕವನ್ನು ಹೇಳಿದ್ದು ಪಂಪ್ವೆಲ್ ಮೇಲ್ಸೇತುವೆ ಇಷ್ಟಾದರೂ ಸಿದ್ಧವಾಗಿರುವುದಕ್ಕೆ ಸಂತೃಪ್ತಿಯಾಗಿದೆ ಎಂದು ಹೇಳಿದರು.
ಆದರೆ ಈ ಪಂಪ್ವೆಲ್ ಮೇಲ್ಸೇತುವೆ ವಾಹನ ಸಂಚಾರ ಮಾಡಲು ತಯಾರಾಗಿದ್ದರೂ ಅಂಡರ್ ಪಾಸ್ ಎತ್ತರ, ಸರ್ವೀಸ್ ರಸ್ತೆ ಸೇರಿದಂತೆ ಹಲವಾರು ಕಾಮಗಾರಿಗಳು ಇನ್ನೂ ಬಾಕಿಯಾಗಿದೆ. ಮಳೆಗಾಲ ಬಂದಾಗ ಈ ಪ್ರದೇಶದಲ್ಲಿ ನೀರು ನಿಲ್ಲುವ ಸಾಧ್ಯತೆ ಹೆಚ್ಚಾಗಿದೆ. ಎಲ್ಲಾ ಕಾಮಗಾರಿಗಳು ಶೀಘ್ರವಾಗಿ ಪೂರ್ಣವಾಗಬೇಕು. ಅದಕ್ಕಿಂತ ಮೊದಲೇ ಈ ಕಾಮಗಾರಿ ಪೂರ್ಣವಾಗಿದೆ ಎಂದು ಸಂಸದರು ಹಕ್ಕನ್ನು ಚಲಾವಣೆ ಮಾಡುವಂತಿಲ್ಲ ಎಂದು ಅವರು ಹೇಳಿದರು.
ಈ ಪ್ರದೇಶದಲ್ಲಿ ಬಾಕಿಯಾಗಿ ಉಳಿದಿರುವ ಕಾಮಗಾರಿಯ ಜೊತೆ ನಂತೂರು ಜಂಕ್ಷನ್ನಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಇನ್ನೂ ಕೂಡಾ ಯೋಜನೆಯೇ ಸಿದ್ಧವಾಗಿಲ್ಲ. ಈ ಕುರಿತು ಕೂಡಲೇ ಸಂಸದರು ಗಮನಹರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮನಪಾ ಸದಸ್ಯರಾದ ಪ್ರವೀಣ್ ಆಳ್ವ, ನವೀನ್ ಡಿಸೋಜಾ, ತಾ.ಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಲ್ಲಾ ಕಾಂಗ್ರೆಸ್ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್, ಕಾಂಗ್ರೆಸ್ ಮುಖಂಡರುಗಳಾದ ಹೇಮಂತ ಗರೋಡಿ, ಆಶಿತ್ ಪಿರೇರ, ಕೇಶವ್ ಮರೋಳಿ, ಜಯಶೀಲ ಅಡ್ಯಂತಾಯ, ನೀರಜ್ ಚಂದ್ರಪಾಳ್, ಶಂಸುದ್ದೀನ್ ಬಂದರ್ ಮೊದಲಾದವರು ಉಪಸ್ಥಿತರಿದ್ದರು.