ಮಂಗಳೂರು, ಜ 27 (Daijiworld News/MSP): ಈಗೇನಿದ್ದನೂ ಸಾಮಾಜಿಕ ಜಾಲತಾಣದಲ್ಲಿ ಮಿಣಿ ಮಿಣಿ ಪೌಡರ್ ನದ್ದೇ ಹವಾ.! ಮಂಗಳೂರು ಬಾಂಬ್ ಪ್ರಕರಣ ಸಂಬಂಧ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಬಾಂಬ್ ನಲ್ಲಿ ಅದೆಂತದೋ ಮಿಣಿ ಮಿಣಿ ಪೌಡರ್ ಬಳಸಲಾಗಿತ್ತು ಎಂದಿದ್ದರು.
ಈ ಪದ ಗಳನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗಿದೆ. ಈ ಹಿಂದೆ ನಿಖಿಲ್ ಎಲ್ಲಿದ್ದಿಯಪ್ಪಾ? ಎಂದು ಕುಮಾರಸ್ವಾಮಿ ಅವರು ಹೇಳಿದ ಪದ ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಈಗ ಮಿಣಿ ಮಿಣಿ ಪೌಡರ್ ಪದದ ಸರದಿಯಾಗಿದೆ.
ಮಿಣಿ ಮಿಣಿ ಪದವೂ ಟ್ರೋಲ್ ಹವಾ ಹೇಗಿತ್ತು ಅಂದರೆ ನ್ಯೂಜಿಲೆಂಡ್ ನಲ್ಲಿ ನಡೆದ ಭಾರತ ನ್ಯೂಜಿಲೆಂಡ್ ಕ್ರಿಕೆಟ್ ಪಂದ್ಯದಲ್ಲಿ ಮಿಣಿಮಿಣಿ ಪೌಡರ್ ಎಂಬ ಪೋಸ್ಟರ್ ಕಾಣಿಸಿಕೊಂಡಿತ್ತು. ಇದೀಗ ಯಕ್ಷಗಾನದಲ್ಲೂ ಮಿಣಿ ಮಿಣಿ ಪುಡಿ ಸದ್ದು ಮಾಡಿದೆ.
ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸರಪಾಡಿ ಮೇಳದ ಪ್ರಸಂಗದಲ್ಲಿ ಕಲಾವಿದರೊಬ್ಬರು , ಹಾಸನದ ಕೂದಲಿಲ್ಲದ ಜ್ಯೋತಿಷಿಯೊಬ್ಬರು ಮಿಣಿ ಮಿಣಿ ಪುಡಿ ಕೊಟ್ಟಿದ್ದಾರೆ ಎನ್ನುವಾಗ ಪ್ರೇಕ್ಷಕರು ನಗೆಗಡಲಿನಲ್ಲಿ ತೇಲಾಡಿದ್ದಾರೆ. ಯಕ್ಷಗಾನದ ಈ ದೃಶ್ಯವೀಗ ಸಾಕಷ್ಟು ವೈರಲ್ ಆಗುತ್ತಿದೆ.