ಮಂಗಳೂರು, ಜ 27 (DaijiworldNews/SM): ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಬಳಿಕ ದೇಶದೆಲ್ಲೆಡೆ ಪೌರತ್ವ ವಿರೋಧಿ ಹೋರಾಟ ತೀವ್ರವಾಗಿ ನಡೆಯುತ್ತಿದೆ. ಮಂಗಳೂರು ನಗರ ಕೂಡ ಇದರಿಂದ ಹೊರತಾಗಿಲ್ಲ. ನಿರಂತರ ವಿರೋಧಿ ಹೋರಾಟ ಕಂಡಿದ್ದ ಮಂಗಳೂರಿನಲ್ಲಿ ಸೋಮವಾರ ಪೌರತ್ವ ಪರ ಬೃಹತ್ ಶಕ್ತಿ ಪ್ರದರ್ಶನ ನಡೆದಿದ್ದು, ಕೇಂದ್ರ ಸಚಿವ ರಾಜನಾಥ್ ಸಿಂಗ್ ಪ್ರಮುಖ ಭಾಷಣಕಾರರಾಗಿದ್ದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವರು ಇದೇ ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದೇನೆ. ಮಂಗಳೂರಿಗೆ ಬಂದಿರುವುದು ನನ್ನ ಸೌಭಾಗ್ಯ ಎಂದರು. ಇನ್ನು ಭಾಷಣ ಮುಂದುವರೆಸಿದ ಅವರು, ಬಿಜೆಪಿ ಹೇಳಿದ್ದನ್ನು ಮಾಡಿ ತೋರಿಸಿದ ಪಕ್ಷ. ದೇಶದ ಜನರಿಗೆ ನಾವು ಕೊಟ್ಟಿರುವ ಭರವಸೆಯನ್ನು ಈಡೇರಿಸಿದ್ದೇವೆ. ಚುನಾವಣೆ ಪ್ರಣಾಳಿಕೆಯಲ್ಲಿ ನಾಗರಿಕತ್ವದ ಭರವಸೆ ನೀಡಿದ್ದೇವು. ಅದನ್ನು ನಾವು ಮಾಡಿದ್ಧೇವೆ. ಅಲ್ಲದೆ ಬಹು ಅಪೇಕ್ಷೆಯ ತ್ರಿವಳಿ ತಲಾಕ್ ನಿಷೇಧ ಮಾಡಲಾಗಿದೆ.
ಇನ್ನು ರಾಮಮಂದಿರ ನಿರ್ಮಾಣಕ್ಕೆ ಸಂವಿಧಾನ ಪ್ರಕಾರವಾಗಿಯೇ ಕಾರ್ಯಗಳನ್ನು ಕೈಗೊಂಡಿದ್ದು, ಅದಕ್ಕೂ ಸುಪ್ರೀಂ ಕೋರ್ಟ್ ಸಮ್ಮತಿಸಿದೆ ಎಂದು ಹೇಳಿದರು. ಪೂರ್ಣ ಬಹುಮತ ಸಿಕ್ಕಿದ ಕಾರಣ 370ನೇ ವಿಧಿಯನ್ನು ರದ್ದು ಮಾಡಿದೆವು. ಕಾಶ್ಮೀರಿ ಪಂಡಿತರು ನಮ್ಮದೇ ನೆಲದಲ್ಲಿ ನಿರಾಶ್ರಿತರಂತೆ ಬದುಕುತ್ತಿದ್ದಾರೆ. ಅವರು ಯಾಕೆ ಆ ರೀತಿ ಬದುಕಬೇಕು? ಯಾಕಾಗಿ ನಿರಾಶ್ರಿತರಂತೆ ಜೀವನ ನಡೆಸಬೇಕು ಎಂದು ರಾಜನಾಥ್ ಸಿಂಗ್ ಪ್ರಶ್ನಿಸಿದರು.