ಮಂಗಳೂರು, ಜ 27 (DaijiworldNews/SM): ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಮಂಗಳೂರಿನಲ್ಲಿ ಕಹಳೆ ಮೊಳಗಿದೆ. ಕಾಯ್ದೆ ವಿರೋಧಿಸುವವರ ನಡುವೆ ಪೌರತ್ವ ಬೆಂಬಲಿಸಿ ಕಡಲನಗರಿಯಲ್ಲಿ ಬಿಜೆಪಿ ಮತ್ತು ಆರ್.ಎಸ್.ಎಸ್. ಬೃಹತ್ ಶಕ್ತಿ ಪ್ರದರ್ಶನ ಮಾಡಿದ್ದು, ವಿರೋಧ ಪಕ್ಷಗಳಿಗೆ ಸೆಡ್ಡು ಹೊಡೆದಿದೆ.
ಹಿಂದುಪರ ಸಂಘಟನೆಗಳು ಒಟ್ಟಾಗಿ ನಗರದಲ್ಲಿ ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ಜನ ಜಾಗೃತಿಯನ್ನು ಮೂಡಿಸಿದ್ದಾರೆ. ಅಲ್ಲದೆ, ಕೇಂದ್ರದ ಪರ ಜನ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಜನಜಾಗೃತಿಯ ಕಿಚ್ಚಿಗೆಕಡಲ ನಗರಿಯತ್ತ ತಲೆ ಎತ್ತಿ ನೋಡುವಂಟೆ ಮಾಡಿದ್ದು, ನಗರದ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗುವ ಮೂಲಕ ಬಹುತೇಕ ಜಂಕ್ಷನ್ ಗಳು ಸ್ತಬ್ದಗೊಂಡಿದ್ದವು.
ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಕಾರ್ಯಕರ್ತರು ಹಾಗೂ ಸಮಾವೇಶಕ್ಕೆ ಆಗಮಿಸಿದ ಜನರು ಹಿಂದೂ ರಾಷ್ಟ್ರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ಪರ ಘೋಷಣೆಗಳನ್ನು ಕೂಗಿದರು. ಪೌರತ್ವ ಕಾಯಿದೆ ಪರವಾದ ಕೂಗು ಮಂಗಳೂರಿನಲ್ಲಿ ಮಾರ್ದನಿಸಿತ್ತು.
ಪೌರತ್ವ ವಿರೋಧಿ ಹೋರಾಟಗಾರರ ನಡುವೆ ಪೌರತ್ವ ಪರವಾಗಿ ನಡೆದ ಶಕ್ತಿ ಪ್ರದರ್ಶನ ಮಹತ್ವವನ್ನು ಪಡೆದುಕೊಂಡಿತು. ಇನ್ನು ಮಟಮಟ ಮಧ್ಯಾಹ್ನದ ಸುಡುಬಿಸಿಲಿನ್ನೂ ಲೆಕ್ಕಿಸದೆ ಸೇರಿದ್ದ ಜನರಲ್ಲಿ ಸಮಾವೇಶಕ್ಕೆ ಆಗಮಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪೌರತ್ವ ಕಾಯಿದೆ ಪರವಾದ ಜನಜಾಗೃತಿ ಮೂಡಿಸಿದರು. ಅಲ್ಲದೆ, ಅಕ್ರಮ ನುಸುಳುಕೋರರನ್ನು ಮಟ್ಟಹಾಕದೆ ಬಿಡುವುದಿಲ್ಲ ಎಂದು ಏರು ಧ್ವನಿಯಲ್ಲಿ ಗುಡುಗಿದರು.
ಸಮಾವೇಶ ಹಾಗೂ ಶಕ್ತಿ ಪ್ರದರ್ಶನ ಹಿಂದೂ ಪರ ಸಂಘಟನೆಗೆ ಪ್ರತಿಷ್ಠೆಯೂ ಆಗಿತ್ತು. ಹಾಗೂ ತಾವು ಬಯಸಿದಂತೆ ಜನ ಸಾಗರವೇ ಕೂಳೂರಿನ ಮೈದಾನದತ್ತ ಹರಿದು ಬಂದಿತ್ತು. 800ಕ್ಕೂ ಅಧಿಕ ಬಸ್ ಗಳ ಮೂಲಕವೇ ಕಾರ್ಯಕರ್ತರು ಆಗಮಿಸಿದ್ದರು. ಇನ್ನು ಸಮಾವೇಶಕ್ಕೆ ಜನಸಾಗರವೇ ಆಗಮಿಸುವ ನಿರೀಕ್ಷೆ ಇದ್ದುದರಿಂದ ಪೊಲೀಸರು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆಗೊಳಿಸಿದರು. ಹಾಗೂ ನಗರದೆಲ್ಲೆಡೆ ಬಿಗು ಬಂದೋಬಸ್ತ್ ಏರ್ಪಡಿಸಿದ್ದರು. ಕಳೆದ ಹಲವು ಸಮಯದಿಂದ ಪೌರತ್ವ ವಿರೋಧದ ಹೋರಾಟವನ್ನು ಮಾತ್ರ ಕಂಡಿದ್ದ ಕಡಲ ನಗರಿ ಇದೇ ಮೊದಲ ಬಾರಿಗೆ ಪೌರತ್ವ ಪರವಾದ ಬೃಹತ್ ಸಮಾವೇಶಕ್ಕೆ ಸಾಕ್ಷಿಯಾಯಿತು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಡಿವಿ ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಕರಾವಳಿಯ ಸಂಸದರು, ಶಾಸಕರು ಪೌರತ್ವದ ಪರ ಸಮಾವೇಶದಲ್ಲಿ ಭಾಗವಹಿಸಿ ಶಕ್ತಿ ಪ್ರದರ್ಶನ ಮಾಡಿದರು.