ಮಂಗಳೂರು, ಜ 27 (DaijiworldNews/SM): ಪೌರತ್ವ ಕುರಿತಂತೆ ಮಂಗಳೂರಿನಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆಸಲಾಗಿದೆ. ಈ ವೇಳೆ ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲಾಯಿತು. ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪೌರತ್ವ ಕಾಯ್ದೆಯ ವಿರುದ್ಧ ಹೋರಾಟ ಮಾಡುತ್ತಿರುವುದು ರಾಷ್ಟ್ರ ವಿರೋಧಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ಮೂಗು ತೂರಿಸಿ ಕಾಯ್ದೆಯನ್ನು ವಿರೋಧಿಸುತ್ತಿರುವುದು ಸರಿಯಲ್ಲ. ನಾವು ಇಲ್ಲಿರುವ ಮುಸ್ಲಿಮರ ಪೌರತ್ವವನ್ನು ನಾವು ಯಾವತ್ತೂ ಕಸಿದುಕೊಳ್ಳುವುದಿಲ್ಲ. ತಪ್ಪು ಮಾಹಿತಿಯನ್ನು ರವಾನಿಸಿ ಗಲಭೆ ಸೃಷ್ಟಿಸಬೇಡಿ ಎಂದು ಹೇಳಿದರು.
ಪೌರತ್ವ ಕಾಯ್ದೆಯನ್ನು ಜಾರಿಗೆ ತಂದ ಕೇಂದ್ರದ ನಾಯಕರಿಗೆ ನಾವು ಅಭಿನಂದನೆಯನ್ನು ಸಲ್ಲಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ಪೌರತ್ವ ಕಾಯ್ದೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿತ್ತು.