ಕಾಸರಗೋಡು, ಜ 27 (DaijiworldNews/SM): ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ದಾಖಲೆಗಳಿಲ್ಲದ ಸುಮಾರು ಹದಿನೈದು ಲಕ್ಷ ರೂಪಾಯಿ ಹಣವನ್ನು ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಲಾಗಿದೆ.
ಬಂಧಿತನನ್ನು ಕಣ್ಣೂರಿನ ಮುಹಮ್ಮದ್ ಕು ೦ಞ (33) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಅಕ್ರಮವಾಗಿ ಹಣ ಸಾಗಾಟ ಮಾಡಲಾಗುತ್ತಿತ್ತು. ವಾಹನ ತಪಾಸಣೆ ವೇಳೆ ಅಕ್ರಮವಾಗಿ ಸಾಗಾಟ ನಡೆಸುತ್ತಿರುವುದು ಪತ್ತೆಯಾಗಿದೆ. ಕಂಕನಾಡಿಯಿಂದ ಓರ್ವ ವ್ಯಕ್ತಿ ಕಣ್ಣೂರು ತಳಿಪರಂಬದಲ್ಲಿರುವ ವ್ಯಕ್ತಿಯೋರ್ವರಿಗೆ ನೀಡಲು ಈ ಹಣ ಒಪ್ಪಿಸಿದ್ದಾಗಿ ಬಂಧಿತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.